ವಿಷ್ಣುವರ್ಧನ್ ಅಭಿಮಾನಿಗಳ ಹೊಸ ಸಾಹಸ ’ಸಿಂಹದ ಹಾದಿ’

New adventure of Vishnuvardhan fans 'Smhada Hadi '

ಡಿಸೆಂಬರ್ 30 ಕನ್ನಡ ಚಿತ್ರರಂಗದ ’ಸಾಹಸ ಸಿಂಹ’ ಖ್ಯಾತಿಯ ನಟ ವಿಷ್ಣುವರ್ಧನ್ ಅಭಿಮಾನಿಗಳನ್ನು ಅಗಲಿದ ದಿನ. 2009ರ ಡಿಸೆಂಬರ್ 30ರ ಮುಂಜಾನೆ ಬಂದ ಸುದ್ದಿ, ಇಡೀ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದಂತಹ ನೋವನ್ನು ನೀಡಿತು.  

ಇದೀಗ 2024 ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್ ಇಲ್ಲದೇ 15 ವರ್ಷ ಸಂದಿದೆ. ಆದರೆ ವಿಷ್ಣುವರ್ಧನ್ ಕಾಲವಾಗಿ ಹದಿನೈದು ವರ್ಷಗಳಾದರೂ ಅವರ ಅಭಿಮಾನಿಗಳು ಅವರನ್ನು ಎಂದಿಗೂ ಮರೆತಿಲ್ಲ. ವಿಷ್ಣುವರ್ಧನ್ ಅಭಿನಯಿಸಿದ ಸಿನೆಮಾಗಳು, ವಿಭಿನ್ನ ಪಾತ್ರಗಳು ಮತ್ತು ಸಮಾಜಮುಖೀ ಕಾರ್ಯಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ’ಸಾಹಸ ಸಿಂಹ’ನನ್ನು ಸದಾ ಜೀವಂತವಾಗಿರಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಇದೀಗ ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿಯೇ ಅವರ ಅಭಿಮಾನಿಗಳು ’ಸಿಂಹದ ಹಾದಿ’ ಎಂಬ ಟೆಲಿಫಿಲಂ ಮೂಲಕ ಅವರನ್ನು ಮತ್ತೆ ತೆರೆಮೇಲೆ ನೆನಪು ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ಹೌದು, ’ಜಿ. ಕೆ. ಸಿನಿ ಫೈಲ್ಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಜಿ. ಕೆ. ಶಶಿರಾಜ್ ದೊರೈ ’ಸಿಂಹದ ಹಾದಿ’ ಎಂಬ ಟೆಲಿಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ. ಬಾಲ್ಯದಿಂದಲೂ ವಿಷ್ಣುವರ್ಧನ್ ಅಭಿಮಾನಿಯಾಗಿರುವ, ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅಭಿನಯ ಮತ್ತು ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಶಶಿರಾಜ್ ದೊರೆ, ವಿಷ್ಣುವರ್ಧನ್ ಅವರ ಅಭಿಮಾನದಿಂದ ’ಸಿಂಹದ ಹಾದಿ’ ಟೆಲಿಚಿತ್ರವನ್ನು ನಿರ್ಮಿಸಿ, ತೆರೆಗೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ. ವಿಷ್ಣುವರ್ಧನ್ ಪುಣ್ಯಸ್ಮರಣೆಗೂ ಮುನ್ನ ನಡೆದ ಸಮಾರಂಭದಲ್ಲಿ, ಹಿರಿಯ ನಿರ್ದೇಶಕ ಎಸ್‌. ವಿ. ರಾಜೇಂದ್ರ ಸಿಂಗ್ ಬಾಬು, ಜೋ ಸೈಮನ್, ’ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷ ಕೃಷ್ಣೇಗೌಡ, ’ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷ ಭಾ. ಮ. ಹರೀಶ್, ’ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಟಿ ಲಕ್ಷ್ಮೀದೇವಮ್ಮ, ವಿಧಾನ ಪರಿಷತ್ ಸದಸ್ಯ ವೀರಯ್ಯ ಸೇರಿದಂತೆ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಇಂಥದ್ದೊಂದು ಅನೇಕ ಗಣ್ಯರು ಹಾಜರಿದ್ದು, ’ಸಿಂಹದ ಹಾದಿ’ ಟೆಲಿಚಿತ್ರದ ಟ್ರೇಲರ್ ಅನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಕೋರಿದರು.  

ಇದೇ ವೇಳೆ ಮಾತನಾಡಿದ ’ಸಿಂಹದ ಹಾದಿ’ ಟೆಲಿಚಿತ್ರದ ನಿರ್ದೇಶಕ ಶಶಿರಾಜ್ ದೊರೆ, ’ವಿಷ್ಣುವರ್ಧನ್ ಅವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ಕಟ್ಟಿಕೊಂಡ ನಾಲ್ಕು ಜನರ ಜೀವನವನ್ನು ಆಧರಿಸಿ, ಈ ಟೆಲಿಚಿತ್ರವನ್ನು ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಅವರ ಚಿತ್ರಗಳು, ಅವರು ನಿರ್ವಹಿಸಿರುವ ಪಾತ್ರಗಳು, ಅವರ ಸಾಮಾಜಿಕ ಕಾರ್ಯಗಳು ಎಲ್ಲವನ್ನೂ ಆಧರಿಸಿ ಈ ಟೆಲಿಚಿತ್ರವನ್ನು ಮಾಡಿದ್ದೇವೆ. ವಿಷ್ಣುವರ್ಧನ್ ಅಭಿಮಾನಿಗಳು ಈ ಕಾರ್ಯದಲ್ಲಿ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವಿಷ್ಣುವರ್ಧನ್ ಅವರ ಜೀವನ-ಸಾಧನೆಯನ್ನು ಮುಂದಿನ ಜನರಿಗೆ ತೋರಿಸುವ ಸಣ್ಣ ಕೆಲಸ ಈ ಟೆಲಿಫಿಲಂನಲ್ಲಿ ಆಗಿದೆ’ ಎಂದು ವಿವರಣೆ ನೀಡಿದರು. ಇನ್ನು ’ಸಿಂಹದ ಹಾದಿ’ ಟೆಲಿಫಿಲಂನಲ್ಲಿ ಶಶಿರಾಜ್ ದೊರೆ, ಸಾಯಿ ಜ್ಯೋತಿ, ಸವಿತಾ, ಪಲ್ಲವಿ ರಾವ್, ಸಂನ್ಸಿಕಾ, ಪ್ರಕೃತಿ, ಹರಿ ಪ್ರಕಾಶ್, ಮಂಜು, ಮಹೇಶ್ ಗುರು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ’ಸಿಂಹದ ಹಾದಿ’ ಟೆಲಿಫಿಲಂ ಸುಮಾರು 75ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ.