ದಕ್ಷಿಣ ಕೊರಿಯಾದಲ್ಲಿ ಏಪ್ರಿಲ್ 9 ರಿಂದ ಆನ್‌ಲೈನ್ ತರಗತಿಗಳೊಂದಿಗೆ ಹೊಸ ಶೈಕ್ಷಣಿಕ ವರ್ಷ ಆರಂಭ

ಸಿಯೋಲ್, ಮಾರ್ಚ್ 31, ಕೊವಿದ್-19 ಸೋಂಕಿನ ದೀರ್ಘಕಾಲದ ಆತಂಕಗಳ ನಡುವೆ ದಕ್ಷಿಣ ಕೊರಿಯಾ ಸರ್ಕಾರ ಈ ವರ್ಷದ ಹೊಸ ಶಾಲಾ ಶೈಕ್ಷಣಿಕ ವರ್ಷವನ್ನು ಏಪ್ರಿಲ್ 9 ರಿಂದ ಆನ್‌ಲೈನ್ ತರಗತಿಗಳೊಂದಿಗೆ ಕ್ರಮೇಣ ಆರಂಭಿಸಲು ನಿರ್ಧರಿಸಿದೆ. ಅನಿಯಮಿತ ವಿಳಂಬದಿಂದ ವಾರ್ಷಿಕ ಶಾಲಾ ದಿನಗಳ ಸಂಖ್ಯೆ ಕಡಿಮೆಯಾಗಬಾರದು ಮತ್ತು ಕಾಲೇಜು ಪ್ರವೇಶ ಪರೀಕ್ಷೆಯ ವೇಳಾಪಟ್ಟಿ ಬದಲಾಗಲಾಗುವುದು ಸೂಕ್ತವಲ್ಲ ಎಂಬ ಅಭಿಪ್ರಾಯವು ಕೋವಿದ್‍-19 ಸೋಂಕು ತಡೆಯುವಿಕೆ ಕ್ರಮಗಳ ಬಗ್ಗೆ ಚರ್ಚಿಸಲು ದಕ್ಷಿಣ ಕೊರಿಯಾದ ಪ್ರಧಾನಿ ಚುಂಗ್ ಸೈ-ಕ್ಯುನ್ ಕರೆದಿದ್ದ ಸರ್ಕಾರಿ ಸಭೆಯಲ್ಲಿ ವ್ಯಕ್ತವಾಗಿದ್ದರಿಂದ ಹೊಸ ಶಾಲಾ ಶೈಕ್ಷಣಿಕ ವರ್ಷ ಆನ್‌ಲೈನ್ ತರಗತಿಗಳೊಂದಿಗೆ ಏಪ್ರಿಲ್ 9 ರಿಂದ ಕ್ರಮೇಣ ಆರಂಭಿಸಲು ನಿರ್ಧರಿಸಲಾಗಿದೆ.
ಕೆಲ ಸೋಂಕು ಪ್ರಕರಣಗಳು ಇನ್ನೂ ಬೆಳಕಿಗೆ ಬಂದಿಲ್ಲವಾದ್ದರಿಂದ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವುದು ಕಷ್ಟ ಎಂದು ಚುಂಗ್ ಹೇಳಿದ್ದಾರೆ. ಶಾಲಾ ಸೋಂಕುಗಳು ಮನೆ ಮತ್ತು ಸ್ಥಳೀಯ ಸಮುದಾಯಗಳಿಗೆ ಹರಡುವ ಬಗ್ಗೆ ಆತಂಕಗಳು ದೂರವಾಗಿಲ್ಲ ಎಂದು ಚುಂಗ್‍ ಹೇಳಿದ್ದಾರೆ.  ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 125 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 9,786 ಕ್ಕೆ ಏರಿದೆ.ಶಿಕ್ಷಣ ಸಚಿವಾಲಯದ ಪ್ರಕಾರ, ಪ್ರೌಢ ಶಾಲಾ ಮತ್ತು ಮಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಏಪ್ರಿಲ್ 9 ರಿಂದ ಆರಂಭವಾಗಲಿವೆ. ಪ್ರಾಥಮಿಕ ಶಾಲೆಯ ನಾಲ್ಕರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಏಪ್ರಿಲ್ 16ರಿಂದ ಆನ್‍ಲೈನ್ ತರಗತಿಗಳು ಆರಂಭವಾಗಲಿವೆ. ದೇಶದ ಸುಮಾರು 54 ಲಕ್ಷ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳೊಂದಿಗೆ ಹೊಸ ಶಾಲಾ ಶೈಕ್ಷಣಿಕ ವರ್ಷವನ್ನು ಇದೇ ಮೊದಲ ಬಾರಿಗೆ ಆರಂಭಿಸಲಾಗುತ್ತಿದೆ.