ಬಾಗಲಕೋಟೆ,ಅ 04: ಕೇಂದ್ರ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ(?) ಹೀಗಾಗಿ ಉತ್ತರ ಕರ್ನಾಟಕ ನೆರೆ ಪರಿಹಾರ ವಿಳಂಬಕ್ಕೆ ಆರ್ಥಿಕ ಕುಸಿತ ಕಾರಣ ಇರಬಹುದು(?) ಎಂದು ಉಡುಪಿಯ ಪೇಜಾವರ ಶ್ರೀಗಳು ಅವರು ಹೇಳಿದ್ದಾರೆ. ಜಮಖಂಡಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಕರ್ನಾಟಕ ಮಾತ್ರ ವಲ್ಲದೆ, ನೆರೆಯ ಮಹಾರಾಷ್ಟ್ರ,ಗುಜರಾತ್ಗೂ ರಾಜ್ಯಗಳಿಗೂ ಪರಿಹಾರ ನೀಡಿಲ್ಲ. ರಾಜ್ಯದ ನೆರೆ ಸಂತ್ರಸ್ಥರಿಗೆ ಆದಷ್ಟು ಶೀಘ್ರದಲ್ಲಿ ಪರಿಹಾರ ನೀಡಿ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ.ಪತ್ರದಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಪತ್ರಕ್ಕೆ ಸ್ಪಂದನೆ ಪ್ರಧಾನಿ ಅವರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಅವರು ತಿಳಿಸಿದರು. ಪ್ರಧಾನಿ ಮೋದಿ ಅವರು ಅನೇಕ ಒಳ್ಳೆಯ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಭಿವೃದ್ದಿ ಕೆಲಸಗಳು ದೇಶದಲ್ಲಿ ನಡೆಯುತ್ತಿವೆ. ನೆರೆ ಪರಿಹಾರ ಮಾತ್ರ ವಿಳಂಬ ಆಗಿದೆ. ಪರಿಹಾರ ಬರಬಹುದು ಎನ್ನುವ ವಿಶ್ವಾಸ ತಮಗೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕಿದ್ದಾರೆ ಎಂಬ ವಿಚಾರದಲ್ಲಿ ತಮಗೆ ಹಾಗೇ ಅನ್ನಿಸುತ್ತಿಲ್ಲ. ಯಡಿಯೂರಪ್ಪ ಮತ್ತು ಸಂಘ ಪರಿವಾರದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇದನ್ನು ಸಂಘ ಪರಿವಾರದವರೇ ಹೇಳಿದ್ದಾರೆ. ಅಲ್ಲಿಂದ ಯಾವುದೇ ತೊಂದರೆ ಆಗಿಲ್ಲ. ಕೆಲ ಮಠಾಧೀಶರು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದು ತಿಳಿಸಿದೆ.ಅದು ಅವರ ವೈಯಕ್ತಿಕ ಅಭಿಪ್ರಾಯ. ಆ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ಶ್ರೀಗಳು ತಿಳಿಸಿದರು. ಸಚಿವ ಸದಾನಂದ ಗೌಡರು ಸೂಲಿಬೆಲೆ ಅವರ ಹೆಸರು ಹೇಳಿ ದೇಶದ್ರೋಹಿ ಎಂದಿಲ್ಲ, ಸೂಲಿಬೆಲೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಯುವಕರ ಸಂಘಟನೆ ಮಾಡಿದ್ದಾರೆ, ಸದಾನಂದಗೌಡರು ಸಹ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಂಸದರ ಬಗ್ಗೆ ಮಾತಾಡಿದರು ಎಂದು ಬೇಸರದಲ್ಲಿ ಹಾಗೆ ಹೇಳಿರಬಹುದು .ಸಂಸದರನ್ನು ಒತ್ತಾಯಿಸಿದಾಕ್ಷಣಕ್ಕೆ ಯಾರನ್ನೂ ದೇಶದ್ರೋಹಿ ಎನ್ನುವುದಕ್ಕೆ ಸಾಧ್ಯವಿಲ್ಲ ಎನ್ನುವ ಮೂಲಕ ಸದಾನಂದಗೌಡ ಹೇಳಿಕೆ ವಿಶ್ಲೇಷಿಸಿದರು.