ಧಾರವಾಡ 02: ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಸಹಾಯ, ಸಹಕಾರ ನೀಡುವುದು ಇಂದಿನ ಬಹುಮುಖ್ಯ ಅಗತ್ಯಗಳಲ್ಲಿ ಒಂದಾಗಿದೆ. ಆ ಮೂಲಕ ಬಡ ಹಾಗೂ ಪ್ರತಿಭಾನ್ವಿತ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕ್ಯಾಡಮ್ಯಾಟಿಕ್ ಕಂಪನಿಯ ನಿರ್ದೇಶಕ ರೋಶನ್ ಸಿಂಗ್ ನವಲೂರು ಹೇಳಿದರು.
ಅವರು ಶುಕ್ರವಾರ ಗಾಂಧಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 5ರಲ್ಲಿ ಬಾಲನಂದನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶಾಲೆಯ ನೂರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜ ನಮಗೆ ಕೊಟ್ಟಿದ್ದನ್ನು ನಾವು ಮರಳಿ ಕೊಡಬೇಕಿದೆ. ಆ ಮೂಲಕ ಬದುಕಿನ ಸಾರ್ಥಕತೆಯನ್ನು ಅರಿತುಕೊಳ್ಳಬೇಕಿದೆ. ಕೊಡುವುದಲ್ಲಿ ಇರುವ ಸಂತೋಷ, ತೆಗೆದುಕೊಳ್ಳುವರಲ್ಲಿಯೂ ಬರುವಂತಾದರೆ ಅದಕ್ಕಿಂತ ಸಂತೋಷ ಬೇರೊಂದು ಇಲ್ಲ. ನಮ್ಮ ತವರು ನೆಲದಲ್ಲಿ ಇಂತಹ ಕೆಲಸ ಮಾಡುತ್ತಿರುವ ಹೆಮ್ಮೆ ನನಗಿದೆ. ಬರುವ ದಿನಗಳಲ್ಲಿ ಇನ್ನೂ ನೆರವು ನೀಡಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ದಾನಿಗಳಾದ ಉಮಾ ರೋಶನ್ ಸಿಂಗ್ ನವಲೂರು ಮಾತನಾಡಿ, ಮಕ್ಕಳು ಚೆನ್ನಾಗಿ ಓದಿ, ಪೋಷಕರ ಹೊರೆ ಕಡಿಮೆ ಮಾಡುವ ಮೂಲಕ ಅವರಿಗೆ ನೆಮ್ಮದಿಯ ಜೀವನ ಬಾಳಿ ಬದುಕುವಂತೆ ನೋಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ನಮ್ಮ ದೇಶದ ಭವಿಷ್ಯವಿದ್ದು, ಅಲ್ಲಿಯ ಮಕ್ಕಳಿಗೆ ನೆರವು ನೀಡಿದರೆ ಅವರು ಸುಂದರ ಪ್ರತಿಭೆಗಳಾಗಿ ಹೊರ ಹೊಮ್ಮುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಭವಿಷ್ಯ ನಮ್ಮ ಕೈಯಲ್ಲಿಯೇ ಇದೆ. ಅದನ್ನು ಬೇರೆಯವರ ಕೈಯಲ್ಲಿ ಕೊಡದೆ, ನಮಗೆ ಹೇಗೆ ಬೇಕೋ ಹಾಗೆ ಬದುಕಿ, ಇತರರಿಗೂ ಮಾದರಿಯಾಗಿ ಬೆಳೆಯಬೇಕು. ಆ ನಿಟ್ಟಿನಲ್ಲಿ ಬಾಲನಂದನ ಟ್ರಸ್ಟ್ 2012ರಿಂದ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ಹೇಳಿದರು.
ಮಕ್ಕಳಿಗೆ ನೋಟ್ ಬುಕ್ಸ್ ವಿತರಣೆ ಮಾಡಿದ ದಾನಿಗಳಾದ ಕ್ಯಾಡಮ್ಯಾಟಿಕ್ ಕಂಪನಿಯ ನಿರ್ದೇಶಕ ರೋಶನ್ ಸಿಂಗ್ ನವಲೂರು ಹಾಗೂ ಉಮಾ ರೋಶನ್ ಸಿಂಗ್ ನವಲೂರು ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಶಂಕರ ಗಂಗಣ್ಣ ಮಾತನಾಡಿ, ಸರಕಾರಿ ಶಾಲೆಗಳಿಗೆ ದಾನಿಗಳ ನೆರವು ಬಹಳಷ್ಟು ಅಗತ್ಯವಿದೆ. ಮಕ್ಕಳಿಗೆ ಶೈಕ್ಷಣಿಕ ನೆರವು ನೀಡಿದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಂತಾಗುತ್ತದೆ. ಆ ನಿಟ್ಟಿನಲ್ಲಿ ಬಾಲನಂದನ ಟ್ರಸ್ಟ್ ಧಾರವಾಡ ಶಹರದ ಹತ್ತಾರು ಶಾಲೆಗಳ ಸಾವಿರಾರು ಮಕ್ಕಳಿಗೆ ದಾನಿಗಳ ನೆರವಿನಿಂದ ನೋಟಬುಕ್ಸ್ ವಿತರಣೆ ಮಾಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಬಿ.ಎಸ. ಗೊರವರ ನಿರೂಪಿಸಿದರು. ಎಂ.ಟಿ. ಸುಂಕದ ಸ್ವಾಗತಿಸಿದರು. ಎ,ಎನ್. ಮುತ್ತಗಿ ವಂದಿಸಿದರು.