ಜು.9 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ

ಜು.9 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ  Nationwide general strike on July 9th

 ಕೊಪ್ಪಳ  20: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಒತ್ತಾಯಿಸಿ ಜುಲೈ 9 ರಂದು ದೇಶ ವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯಾಧ್ಯಕ್ಷಿ ವರಲಕ್ಷ್ಮಿ  ಹೇಳಿದರು.

ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಆಗ್ರಹಿಸಲಾಗುವುದು, ಜೀವನದ ಯೋಗ್ಯ ಕನಿಷ್ಠ ವೇತನ 36,000 ಕ್ಕೆ ನಿಗದಿ ಮಾಡಬೇಕು, ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ 8000 ಪಿಂಚಣಿ ನೀಡಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ ಮತ್ತು ನಗದಿಕರಣ ನಿಲ್ಲಿಸಬೇಕು, ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದರು. ಕಾರ್ಯದರ್ಶಿ ಪ್ರತಾಪ ಸಿಂಹ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಅಡಿ ದಿನದ ಕೂಲಿ 600ಕ್ಕೆ ದುಡಿತದ ದಿನಗಳನ್ನು 200 ಕ್ಕೆ ಹೆಚ್ಚಿಸಬೇಕು, ಅಂಗನವಾಡಿ ಬಿಸಿಯೂಟ ಆಶಾ ಮುಂತಾದ ಸ್ಕೀಮ್ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು, ರಾಜ್ಯದಲ್ಲಿ ರೈತ ವಿರೋಧಿ ತಿದ್ದುಪಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆರ್‌. ಎಸ್‌. ಬಸವರಾಜ್, ನಿರುಪಾದಿ, ಲಕ್ಷ್ಮೀದೇವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿಂಸಾಬ ಸರ್ದಾರ್ ಉಪಸ್ಥಿತರಿದ್ದರು.