ನಾಳೆಯಿಂದ ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ ಸಂವೀಕ್ಷಣ
ಬೆಳಗಾವಿ 24: ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯವು ಪ್ರತಿವರ್ಷದಂತೆ ಹಮ್ಮಿಕೊಳ್ಳುವ ವೈಭವಯುತ ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ 'ಸಂವೀಕ್ಷಣ - 2025' ಈ ವರ್ಷ ಮಾರ್ಚ್ 26 ಮತ್ತು 27 ರಂದು ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಇತ್ತೀಚಿನ ತಾಂತ್ರಿಕತೆಯ ಬೆಳವಣಿಗೆ, ನಾವೀನ್ಯತೆ, ಮತ್ತು ಕ್ರಿಯಾತ್ಮಕ ಜ್ಞಾನವನ್ನು ಉತ್ತೇಜಿಸುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗಿದ್ದು ಉತ್ಸವದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿ, ತಮ್ಮ ಪ್ರತಿಭೆ ಹಾಗೂ ನಾವೀನ್ಯತೆಯನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಲಿದೆ.
ಈ ಉತ್ಸವದಲ್ಲಿ ಸಿವಿಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ಸ್, ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ ಸೈನ್ಸ್ ಆಂಡ್ ಬ್ಯುಸಿನೆಸ್ ಸಿಸ್ಟಮ್ಸ್ ವಿಭಾಗದ ವತಿಯಿಂದ ಆಯೋಜನೆ ಮಾಡಲಿರುವ ವಿವಿಧ ತಾಂತ್ರಿಕ ಸ್ಪರ್ಧೆಗಳು, ಕಾರ್ಯಾಗಾರಗಳು, ತಾಂತ್ರಿಕ ಚರ್ಚಾ ವೇದಿಕೆಗಳು, ಪ್ರೊಜೆಕ್ಟ್ ಪ್ರದರ್ಶನಗಳು, ಪೇಪರ್ ಪ್ರಸ್ತುತಿಕೆಯಂತಹ ಕ್ರಿಯಾತ್ಮಕ ಸ್ಪರ್ಧೆಗಳು ಪ್ರಮುಖ ಆಕರ್ಷಣೆ ಆಗಿವೆ.
ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ತಾಂತ್ರಿಕ ಉತ್ಸವವನ್ನು ಉದ್ಘಾಟಿಸಲಿದ್ದು, ಬೆಳಗಾವಿ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಪಾಟೀಲ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸುತ್ತಿದ್ದು ತಾಂತ್ರಿಕ ಕ್ಷೇತ್ರದ ಪ್ರಖ್ಯಾತ ವ್ಯಕ್ತಿಗಳು, ಇಂಡಸ್ಟ್ರಿ ಲೀಡರ್‌ಗಳು ಹಾಗೂ ಸಂಶೋಧನಾ ಸಂಸ್ಥೆಗಳ ಹಿರಿಯ ವಿಜ್ಞಾನಿಗಳು ತಾಂತ್ರಿಕ ಉತ್ಸವಕ್ಕೆ ಆಗಮಿಸಲಿದ್ದಾರೆ.
ಸಂವೀಕ್ಷಣ - 2025, ವಿದ್ಯಾರ್ಥಿಗಳಿಗೆ ಕೇವಲ ಸ್ಪರ್ಧಾತ್ಮಕ ವೇದಿಕೆಯಾಗದೇ, ತಮ್ಮ ಭಾವಿ ವೃತ್ತಿ ಗುರಿಗಳನ್ನು ರೂಪಿಸಿಕೊಳ್ಳಲು ಪ್ರೇರಣೆಯಾಗುವಂತಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಲ್ಲಾ ವಿದ್ಯಾರ್ಥಿಗಳಿಗೆ, ತಾಂತ್ರಿಕ ತಜ್ಞರಿಗೆ ಸಂಸ್ಥೆಯ ಪ್ರಾಂಶುಪಾಲ ಡಾ. ಬಿ. ಆರ್. ಪಟಗುಂದಿ ಅವರು ಹಾಗೂ ಸಮೀಕ್ಷಣ ಸಂಯೋಜಕರು ಆಹ್ವಾನ ನೀಡಿದ್ದಾರೆ.
ಜೊತೆಗೆ ಈ ತಾಂತ್ರಿಕ ಉತ್ಸವದ ಮುಂದುವರೆದ ಭಾಗವಾಗಿ ಮಾರ್ಚ್ 27 ರಂದು ಸಂಜೆ 6.00 ಘಂಟೆಗೆ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಜರುಗುತ್ತಿದ್ದು, ಕನ್ನಡ ನಾಡಿನ ಹೆಮ್ಮೆಯ ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರೂ ಆದ ರಘು ದೀಕ್ಷಿತ್ ಮತ್ತು ಅವರ ತಂಡದಿಂದ ಲೈವ್ ಕನ್ಸರ್ಟ್ ಕಾರ್ಯವನ್ನು ಆಯೋಜನೆ ಮಾಡಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು, ಸಂಗೀತ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.