ರಾಷ್ಟ್ರಧ್ವಜ ಸಾತ್ರಂತ್ರ್ಯ, ಏಕತೆ, ಸಮಗ್ರತೆಯ ಸಂಕೇತ: ಖೊದ್ನಾಪೂರ

ರಾಷ್ಟ್ರಧ್ವಜ ಸಾತ್ರಂತ್ರ್ಯ, ಏಕತೆ, ಸಮಗ್ರತೆಯ ಸಂಕೇತ: ಖೊದ್ನಾಪೂರ National flag is a symbol of sovereignty, unity and integrity: Khodnapur

ವಿಜಯಪುರ 23: ನಮ್ಮ ಭಾರತೀಯ ಧ್ವಜವು ಅಪಾರ ಮೌಲ್ಯ ಮತ್ತು ಮಹತ್ವವನ್ನು ಹೊಂದಿದೆ. ಇದು ನಮ್ಮ ಹೆಮ್ಮೆ, ಏಕತೆ ಮತ್ತು ದೇಶಭಕ್ತಿಉ ಭಾವವನ್ನು ಒಳಗೊಂಡಿದೆ. ಧ್ವಜವು ಭಾರತದ ಶ್ರೀಮಂತ ಪರಂಪರೆ ಮತ್ತು ಸ್ವಾತಂತ್ರ್ಯಕ್ಕಾಗಿ ಅದರ ಹೋರಾಟ, ಸತ್ಯ, ಶಾಂತಿ, ತ್ಯಾಗ, ಬಲಿದಾನ ಮತ್ತು ಅಹಿಂಸೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಧ್ವಜವು ಪ್ರತಿನಿಧಿಸುವ ಶಾಂತಿ, ವೈವಿಧ್ಯತೆ ಮತ್ತು ಪ್ರಗತಿಯ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂದು ಪ್ರೊ. ಎಂ.ಎಸ್‌.ಖೊದ್ನಾಪೂರ ಅಭಿಪ್ರಾಯಪಟ್ಟರು.  

ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ದಿ. 22ರಂದು ಆಯೋಜಿಸಿದ್ದ ರಾಷ್ಟ್ರೀಯ ಧ್ವಜ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ರಾಷ್ಟ್ರೀಯ ಧ್ವಜ ದಿನವನ್ನು ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ಆಚರಿಸುವ ಮೂಲಕ ವಿದ್ಯಾರ್ಥಿಗಳು, ಸಾರ್ವಜನಿಕರು, ಯುವಕರಿಗೆ ರಾಷ್ಟ್ರಧ್ವಜದ ಇತಿಹಾಸ, ಮಹತ್ವ ಮತ್ತು ಸಾಂಕೇತಿಕತೆಯ ಬಗ್ಗೆ ಅರಿವು ಮೂಡಿಸುವುದು, ರಾಷ್ಟ್ರ ಧ್ವಜ ಮತ್ತು ಅದು ಪ್ರತಿನಿಧಿಸುವ ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಏಕತೆಗೆ ದೇಶಭಕ್ತಿ, ಗೌರವ ಮತ್ತು ಹೆಮ್ಮೆಯ ಭಾವವನ್ನು ಒಡಮೂಡಿಸಬೇಕು. ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ವೀರ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಪ್ರತಿಬಿಂಬಿಸುವದು ಈ ದಿನದ ಆಚರಣೆಯ ಪ್ರಮುಖ ಧ್ಯೇಯವಾಗಿದೆ ಎಂದರು.  

ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರಭಕ್ತಿ, ಧ್ವಜದ ಗೌರವ ವಂದನೆ, ಏಕತೆ ಮತ್ತು ಭವ್ಯ ಸಂಸ್ಕೃತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಅದಕ್ಕಾಗಿ ಈ ದೇಶದ ಜವಾಬ್ದಾರಿಯುತ ನಾಗರೀಕರಾದ ನಾವೆಲ್ಲರೂ ತ್ರಿವರ್ಣ ಧ್ವಜದ ಪ್ರಾಮುಖ್ಯತೆ ಮತ್ತು ರಾಷ್ಡ್ರವನ್ನು ಒಂದುಗೂಡಿಸುವಲ್ಲಿರುವ ಪಾತ್ರವನ್ನು ಅರಿತು ರಾಷ್ಟ್ರಧ್ವಜವನ್ನು ಗೌರವಿಸುತ್ತಾ, ಅದರ ಮೌಲ್ಯಗಳನ್ನು ಯುವ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ. ಈ ರಾಷ್ಟ್ರೀಯ ಧ್ವಜ ದಿನದ ಪ್ರಮುಖ ಉದ್ದೇಶವು ರಾಷ್ಟ್ರ ಧ್ವಜದ ಚಿಹ್ನೆಯನ್ನು ಗೌರವಿಸುವ ಮೂಲಕ ನಾಗರೀಕರಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಮನೋಭಾವವನ್ನು ಬಲಪಡಿಸುವದೇ ಆಗಿದೆ ಎಂದು ಹೇಳಿದರು. 

ಪ್ರೊ. ವ್ಹಿ.ಆರ್‌.ಕಬಾಡೆ, ಪ್ರೊ. ಆರ್‌.ಐ.ಜೋಗೂರ ಇನ್ನಿತರರು ಉಪಸ್ಥಿತರಿದ್ದರು. ಬಿ.ಕಾಂ ವಿಭಾಗದ ಪ್ರಕಾಶ ಸಣ್ಣಕ್ಕಿ ಸ್ವಾಗತಿಸಿದರು. ಈರಣ್ಣ ಹಟ್ಟಿ ವಂದಿಸಿದರು. ಕಿರಣ ಚವ್ಹಾಣ ನಿರೂಪಿಸಿದರು. ವಿದ್ಯಾರ್ಥಿಗಳು ಭಾಗವಹಿಸಿದ್ದರು.