ನವದೆಹಲಿ, ಜ 25, ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ‘ಚುನಾವಣಾ ಪ್ರಕ್ರಿಯೆಗಳು ಸುಗಮಗೊಳಿಸಿ ಎಲ್ಲರೂ ಪಾಲ್ಗೊಳ್ಳುವಂತೆ ಪ್ರಯತ್ನಗಳನ್ನು ಮಾಡುತ್ತಿರುವ ಚುನಾವಣಾ ಆಯೋಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ‘ಈ ದಿನ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾರರ ಜಾಗೃತಿ ಮತ್ತು ಮತದಾನ ಪ್ರಮಾಣ ಏರಿಕೆಯಾಗುವಂತೆ ನಮ್ಮನ್ನು ಪ್ರೇರೇಪಿಸಲಿ.’ ಎಂದು ಪ್ರಧಾನಿ ಹೇಳಿದ್ದಾರೆ.ಯುವ ಮತದಾರರು ರಾಜಕೀಯ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ 2011ರಿಂದ ಪ್ರತಿವರ್ಷ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ವನ್ನಾಗಿ ಆಚರಿಸುತ್ತಿದೆ. ಈ ದಿನ ಚುನಾವಣಾ ಆಯೋಗದ ಸ್ಥಾಪನಾ ದಿನವೂ ಆಗಿದೆ. ‘ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಚುನಾವಣಾ ಸಾಕ್ಷರತೆ’ ಎಂಬುದು ಈ ವರ್ಷದ ರಾಷ್ಟ್ರೀಯ ಮತದಾರರ ದಿನದ ಘೋಷವಾಕ್ಯವಾಗಿದೆ.