ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ

ಬೈಲಹೊಂಗಲ 24: ರೈತರು ಶ್ರಮಜೀವಿಗಳಾಗಿ ಕೃಷಿಯನ್ನೆ ನಂಬಿ ಎಲ್ಲರಿಗೂ ಅನ್ನ ನೀಡುವ ಪ್ರಮುಖ ಪಾತ್ರವಹಿಸುವ ರೈತರಿಗಾಗಿ ಡಿ.23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದರು.

     ಸೋಮವಾರ ಪಟ್ಟಣದ ಚನ್ನಮ್ಮಾ ಸಮಾಧಿ ರಸ್ತೆಯಲ್ಲಿಯ ಭಾರತೀಯ ಕೃಷಿಕ ಸಮಾಜ ಕಛೇರಿಯಲ್ಲಿ ಮಾಜಿ ಪ್ರಧಾನಿ ಡಾ.ಚೌದರಿ ಚರಣ್ ಸಿಂಗರವರು 117ನೇ ಜನ್ಮ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಡಾ. ಚೌದರಿ ಚರಣ್ ಸಿಂಗರವರು ರೈತ ಕುಟುಂಬದಿಂದ ಬಂದವರಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾದಾಗ ಬಜೆಟ್ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು. ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು ಎಂದರು.

  ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1979 ನೇ ಸಾಲಿನ ಬಜೇಟನ್ನು ಮಂಡಿಸಿದ ಇವರು ರೈತರ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲ ಅಂಶಗಳನ್ನು ಬಜೆಟ್ನಲ್ಲಿ ಸೇರಿಸಿದ್ದರು. ಇದರಲ್ಲಿ ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರು ಮತ್ತು ಹಣದಾಳದಾರರ ವಿರುದ್ಧ ಒಗ್ಗೂಡಿಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದರು. ಇವರು ಲೋಕಸಭೆಯಲ್ಲಿ ಪರಿಚಯಿಸಿದ್ದ ಕೃಷಿ ಉತ್ಪಾದನೆ ಮಸೂದೆಯು ಅತ್ಯಂತ ಪ್ರಸಿದ್ಧ ಮಾರುಕಟ್ಟೆ ಮಸೂದೆಯಾಗಿತ್ತು. ಈ ಮಸೂದೆಯನ್ನು ಹಣವುಳ್ಳ ವಿತರಕರು ಮತ್ತು ಭೂ ಮಾಲಿಕರು ರೈತರನ್ನು ಶೋಷಣೆ ಮಾಡುವುದರಿಂದ ತಡೆಯುವ ಉದ್ದೇಶದಿಂದ ಹೊರತರಲಾಗಿತ್ತು ಎಂದರು.

        ಭಾರತೀಯ ಕೃಷಿಕ ಸಮಾಜ ರಾಜ್ಯ ಪ್ರಧಾನ ಕಾರ್ಯದಶರ್ಿ ಮಹಾಂತೇಶ ಕಮತ ಮಾತನಾಡಿ, ಶ್ರೀ ಚೌದರಿ ಚರಣ್ ಸಿಂಗ ರವರು ಉತ್ತಮ ವಾಗ್ಮಿಗಳಲ್ಲದೆ, ಒಳ್ಳೆಯ ಬರಹಗಾರರೂ ಆಗಿದ್ದರು. ಬರಹಗಾರರಾಗಿ ರೈತರ, ಬಡವರ ಸಮಸ್ಯೆಗಳ ಕುರಿತ ಆಲೋಚನೆಗಳನ್ನು ಚಿತ್ರಿಸುವ ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿ ಎಲ್ಲ ಸಮಸ್ಯೆಗಳಿಗೆ ಸಾಧ್ಯವಿರುವಂತಹ ವಿವಿಧ ಪರಿಹಾರಗಳನ್ನು ಸಹ ಕೊಡುತ್ತಿದ್ದರು ಎಂದರು.

  ಸುರೇಶ ಹೊಳಿ, ಮಹಾದೇವ ಕಲಭಾಂವಿ, ಶ್ರೀಪತಿ ಪಠಾಣಿ, ದುಂಡಪ್ಪ ಪಣದಿ, ಮಹಾಂತೇಶ ಕಲಭಾಂವಿ, ಈರಪ್ಪ ಹುಬ್ಬಳ್ಳಿ, ಗುಳಪ್ಪ ಕಲಭಾಂವಿ, ಮಡಿವಾಳಪ್ಪ ಬುಳ್ಳಿ ಹಾಗೂ ಉಪಸ್ಥಿತರಿದ್ದರು.