ನಾಗರ ಪಂಚಮಿ: ಬದಲಾಗುತ್ತಿರುವ ಸಂಭ್ರಮದ ಸೊಗಡು

ನಾಗರ ಪಂಚಮಿ: ಬದಲಾಗುತ್ತಿರುವ ಸಂಭ್ರಮದ ಸೊಗಡು  Nagara Panchami: The Changing Essence of the Celebration

ಲೋಕದರ್ಶನ ವರದಿ 

ಮಹಾಲಿಂಗಪುರ 18 : ಒಂದು ಕಾಲದಲ್ಲಿ ನಾಗರ ಪಂಚಮಿ ಎಂದರೆ ಮನೆ ತುಂಬಾ ಹಬ್ಬದ ವಾತಾವರಣ. ಅಡುಗೆ ಮನೆಯಲ್ಲಿ ಹೆಣ್ಣುಮಕ್ಕಳ ಓಡಾಟ, ಸಿಹಿ-ಖಾರದ ತಿಂಡಿಗಳ ಘಮಘಮ, ಜೋಕಾಲಿಯಲ್ಲಿ ಮಕ್ಕಳ ನಗು, ಅವಿಭಾಜ್ಯ ಭಾಗವಾಗಿದ್ದವು. ನಾಗಪ್ಪನಿಗೆ ಭಕ್ತಿಯಿಂದ ನೈವೇದ್ಯ ಅರ​‍್ಿಸಿ, ಅದನ್ನು ಎಲ್ಲರೊಂದಿಗೆ ಹಂಚಿಕೊಂಡು ತಿನ್ನುವ ಆತ್ಮೀಯತೆಯೂ ಇತ್ತು. ಆದರೆ ಕಾಲ ಬದಲಾಗುತ್ತಿದ್ದಂತೆ ಈ ಸಂಭ್ರಮದ ಸ್ವರೂಪವೂ ನಿಧಾನವಾಗಿ ಬದಲಾಗುತ್ತಿದೆ.  

ಹಿಂದೆ ನಾಗರ ಪಂಚಮಿಗೆ ಹಲವು ದಿನಗಳ ಮುಂಚೆಯೇ ಮನೆಗಳಲ್ಲಿ ಸಿದ್ಧತೆ ಆರಂಭವಾಗುತ್ತಿತ್ತು. ರವೆ ಉಂಡೆ, ಶೇಂಗಾ ಉಂಡೆ, ಬೇಸನ್ ಉಂಡೆ, ಲಾಡು, ಮೈಸೂರು ಪಾಕ್, ಬುಂದಿ, ಅಳ್ಳದ ಖಾದ್ಯ, ಚಕ್ಕುಲಿ, ಖಾರದ ಚೂಡ ಸೇರಿದಂತೆ ಹತ್ತಾರು ಬಗೆಯ ತಿಂಡಿಗಳನ್ನು ಮನೆಯ ಹೆಣ್ಣುಮಕ್ಕಳು ತಮ್ಮ ಕೈಯಾರೆ ತಯಾರಿಸುತ್ತಿದ್ದರು. ಪ್ರತಿಯೊಂದು ತಿನಿಸಿನಲ್ಲೂ ಮನೆಯವರ ಪ್ರೀತಿ, ಶ್ರಮ ಮತ್ತು ಭಕ್ತಿಯ ಸೊಗಡು ಬೆರೆತಿರುತ್ತಿತ್ತು.  

ಇಂದು ಇದೇ ತಿಂಡಿಗಳು ಅಂಗಡಿಗಳಲ್ಲೇ ಸಿದ್ಧವಾಗಿ ದೊರೆಯುತ್ತವೆ. ಸಮಯದ ಅಭಾವ, ಉದ್ಯೋಗ, ಶಿಕ್ಷಣ ಹಾಗೂ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಲವರು ಮಾರುಕಟ್ಟೆಯಿಂದ ಸಿಹಿ-ಖಾರದ ಪದಾರ್ಥಗಳನ್ನು ಖರೀದಿಸಿ ಮನೆಗೆ ತಂದು ನೈವೇದ್ಯ ಅರ​‍್ಿಸುತ್ತಿದ್ದಾರೆ. ಇದರಿಂದ ವ್ಯಾಪಾರಸ್ಥರಿಗೆ ಉತ್ತಮ ವ್ಯಾಪಾರವಾಗುತ್ತಿದ್ದರೂ, ಮನೆಯ ಅಡುಗೆ ಮನೆಯೊಂದಿಗೆ ಬೆಸೆದುಕೊಂಡಿದ್ದ ಹಬ್ಬದ ನೆನಪುಗಳು ನಿಧಾನವಾಗಿ ದೂರವಾಗುತ್ತಿವೆ.  

ನಾಗರ ಪಂಚಮಿಯಂದು ನಾಗದೇವರಿಗೆ ಹಾಲು ಎರೆಯುವುದು, ಎಳ್ಳಿನ ಉಂಡೆ, ಮೋದಕ, ಕಡುಬು, ಕಿಚಡಿ ಸೇರಿದಂತೆ ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಅರ​‍್ಿಸುವುದು ವಾಡಿಕೆಯಾಗಿತ್ತು. ಬಳಿಕ ಆ ತಿಂಡಿಗಳನ್ನು ಬೀಗರಿಗೆ, ಅಕ್ಕ-ತಂಗಿಯರಿಗೆ, ಬಂಧು-ಬಳಗ ಹಾಗೂ ಹಿತೈಷಿಗಳ ಮನೆಗಳಿಗೆ ಕಳುಹಿಸಲಾಗುತ್ತಿತ್ತು. ಅದು ಕೇವಲ ಆಹಾರ ಹಂಚಿಕೆಯಲ್ಲ; ಒಂದು ಮನೆಯ ಪ್ರೀತಿಯನ್ನು ಮತ್ತೊಂದು ಮನೆಗೆ ತಲುಪಿಸುವ ಪರಂಪರೆಯಾಗಿತ್ತು.  

ಆದರೆ ಇಂದು ಅಂಗಡಿಯಿಂದ ತಂದ ತಿಂಡಿ ನೈವೇದ್ಯವಾಗುತ್ತಿದೆ. ಅದರ ರುಚಿ ಸಿಗಬಹುದು; ಆದರೆ ಮನೆಯವರ ಕೈಯ ಸ್ಪರ್ಶ, ಅಮ್ಮ-ಅಜ್ಜಿಯರ ಪ್ರೀತಿ ಮತ್ತು ಆ ದಿನಗಳ ನೆನಪುಗಳನ್ನು ಅದರಿಂದ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ಹಿರಿಯರನ್ನು ಕಾಡುತ್ತಿದೆ.  

ಸಂಪ್ರದಾಯ ಉಳಿಸುವ ಹೊಣೆ ಮುಂದಿನ ಪೀಳಿಗೆಯದು  ಆಧುನಿಕ ಜೀವನ ಅನಿವಾರ್ಯ. ಶಿಕ್ಷಣ, ಉದ್ಯೋಗ ಮತ್ತು ತಂತ್ರಜ್ಞಾನ ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಆದರೆ ಆಧುನಿಕತೆಯ ಹೆಸರಿನಲ್ಲಿ ನಮ್ಮ ಬೇರುಗಳನ್ನು ಮರೆಯಬಾರದು. ವರ್ಷಕ್ಕೊಮ್ಮೆ ಬರುವ ನಾಗರ ಪಂಚಮಿಯಂತಹ ಹಬ್ಬವನ್ನು ಕುಟುಂಬದವರೆಲ್ಲರೂ ಸೇರಿ ಆಚರಿಸಿ, ಮಕ್ಕಳಿಗೆ ಅದರ ಮಹತ್ವವನ್ನು ತಿಳಿಸುವ ಪ್ರಯತ್ನ ನಡೆಯಬೇಕು.  

ಹಳೆಯ ತಲೆಮಾರಿನವರು ಇರುವ ಮನೆಗಳಲ್ಲಿ ಇಂದಿಗೂ ನಾಗರ ಪಂಚಮಿಯ ಸಾಂಪ್ರದಾಯಿಕ ಸೊಗಡು ಕಾಣಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ನಾಳೆ ನಮ್ಮ ಮಕ್ಕಳು “ನಾಗರ ಪಂಚಮಿ ಎಂದರೇನು?” ಎಂದು ಕೇಳಿದಾಗ ಉತ್ತರವನ್ನು ಪುಸ್ತಕದಲ್ಲಿ ಹುಡುಕುವ ಪರಿಸ್ಥಿತಿ ಬರಬಾರದು. ಅಮ್ಮನ ಅಡುಗೆಮನೆಯಲ್ಲಿ, ಅಜ್ಜಿಯ ನೆನಪುಗಳಲ್ಲಿ ಮತ್ತು ಮನೆಯ ಪೂಜಾ ಕೋಣೆಯಲ್ಲಿ ನಾಗರ ಪಂಚಮಿಯ ಸಂಭ್ರಮ ಜೀವಂತವಾಗಿರಲಿ ಎಂಬುದೇ ಹಿರಿಯರ ಆಶಯ.