ಶರಣರ ನಾಡಿನ ನಾಡದೇವಿ ಉತ್ಸವ. ಸಂಭ್ರಮದ ಮೆರವಣಿಗೆ

ಶರಣರ ನಾಡಿನ ನಾಡದೇವಿ ಉತ್ಸವ. ಸಂಭ್ರಮದ ಮೆರವಣಿಗೆ Nadadevi Festival of Sharanara Nadu. A festive procession

ದೇವರಹಿಪ್ಪರಗಿ 28 : ಪಟ್ಟಣದ ಬುದ್ನಿ ಓಣಿಯಲ್ಲಿ ಶರಣರ ನಾಡಿನ ನಾಡದೇವಿ ಉತ್ಸವ ಕಮಿಟಿಯಿಂದ ನಾಡದೇವಿಯನ್ನು ಶ್ರದ್ಧೆ, ಭಕ್ತಿ, ಭಾವದಿಂದ ಪೂಜಿಸಲಾಗುತ್ತಿದೆ.ಪ್ರತಿವರ್ಷದಂತೆ ಈ ವರ್ಷವೂ ವಿಜಯದಶಮಿಯ ಆಚರಣೆಯ ಐದು ದಿನಗಳ ಮುಂಚಿತವಾಗಿ ಪ್ರತಿಷ್ಠಾಪನೆಯಾಗುವ ನಾಡದೇವಿಯನ್ನು ಅತ್ಯಂತ ವೈಭವಪೂರ್ಣವಾಗಿ ಮೆರವಣಿಗೆಯ ಮೂಲಕ ತಂದು, ಪ್ರತಿಷ್ಠಾಪಿಸಿ ನಂತರ ಐದು ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಶಾಸ್ತ್ರೋಕ್ತ ಪೂಜೆ ನೆರವೇರಿಸಲಾಗುತ್ತದೆ. 

ರಾತ್ರಿ ವಿವಿಧ ಕಲಾವಿದರೂ, ಸಂಗೀತಗಾರರು, ವಾಗ್ಮಿಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಮನ ಸೆಳೆಯಲಾಗುತ್ತಿದೆ.ಈ ಬಾರಿ ನಾಡದೇವಿ ಉತ್ಸವಕ್ಕೆ ಪರದೇಶಿ ಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು ಚಾಲನೆ ನೀಡಿದರು.ನಂತರ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರುಗು ತಂದರು.ಪಟ್ಟಣದ ಇಂಡಿ ರಸ್ತೆ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭಮೇಳ, ಡೊಳ್ಳು ವಾದ್ಯಗಳು,ಜಾನಪದ ಕಲಾತಂಡಗಳು ಮೂಲಕ ನೋಡುಗರ ಕಣ್ಮನ ಸೆಳೆದವು.ನಂತರ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬಸ್ ನಿಲ್ದಾಣ,ಮೊಹರೆ ವೃತ್ತ, ಮುಖ್ಯ ಬಜಾರ್ ರಸ್ತೆ ಮೂಲಕ ಬುದ್ನಿ ಅವರ ಓಣೆಯಲ್ಲಿ ಪ್ರತಿಷ್ಠಾಪಿಸಲಾಯಿತು.ಉತ್ಸವ ಕಮಿಟಿಯ ಸದಸ್ಯರುಗಳಾದ ದಿನೇಶಗೌಡ ಪಾಟೀಲ ಹಾಗೂ ಕಾಶಿನಾಥ ಕೋರಿ ಅವರು ಪತ್ರಿಕೆಯೊಂದಿಗೆ ಮಾತನಾಡಿ,ಪ್ರತಿವರ್ಷ ನಾಡದೇವಿ ಉತ್ಸವವನ್ನು ಅತ್ಯಂತ ಭಕ್ತಿಯಿಂದ ಆಚರಿಸಲಾಗುತ್ತಿದೆ. ದೇವಿಯ ಪೂಜೆ ಐದು ದಿನಗಳ ಕಾಲ ಸಾಂಗವಾಗಿ ಸಾಗಿ ಪ್ರಸಾದ ವಿತರಣೆಯಾಗುತ್ತದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲ ಸಮುದಾಯದವರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಶ್ರದ್ಧೆಯಿಂದ ಭಾಗವಹಿಸಿ ಮೆರುಗು ತರುತ್ತಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.