ಸಮಾಜಮುಖಿ ವ್ಯಕ್ತಿತ್ವ ವಿಕಸನಕ್ಕೆ ಎನ್‌.ಎಸ್‌.ಎಸ್‌. ಸಹಕಾರಿ

ಸಮಾಜಮುಖಿ ವ್ಯಕ್ತಿತ್ವ ವಿಕಸನಕ್ಕೆ ಎನ್‌.ಎಸ್‌.ಎಸ್‌. ಸಹಕಾರಿ NSS helps in developing a socially-oriented personality

 

ಗದಗ 29: ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸಿನ ಆಶಯದಂತೆ ಭಾರತ ಸರ್ಕಾರವು 1969ರ ಸೆಪ್ಟೆಂಬರ್ 24ರಂದು ಆರಂಭಿಸಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಯುವಕರು ಸ್ವ-ಇಚ್ಛೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಮಂಜುನಾಥ ಬ್ಯಾಹಟ್ಟಿ ಹೇಳಿದರು.  

ಅವರು ಹುಲಕೋಟಿಯ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌.ಎಸ್‌.ಎಸ್‌. ಘಟಕವು ಹೊಸಹಳ್ಳಿ ಗ್ರಾಮದಲ್ಲಿ ಆಯೋಜಿಸಿರುವ 2025-26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ, ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಯುವಕರು ಭವಿಷ್ಯತ್ತಿನಲ್ಲಿ ಸಮಾಜಮುಖಿ ನಾಯಕರಾಗಲು ಸಾಧ್ಯವೆಂದು ಹೇಳಿದರು.  

ಮುಖ್ಯ ಅತಿಥಿಗಳಾದ ಕುರ್ತಕೋಟಿ ಗ್ರಾಮ ಪಂಚಾಯತಿ ಸದಸ್ಯ ಚನ್ನಪ್ಪ ಬ್ಯಾಹಟ್ಟಿ ಅವರು ಎನ್‌.ಎಸ್‌.ಎಸ್‌. ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ, ಸಹಬಾಳ್ವೆ, ಹೊಂದಾಣಿಕೆ, ಆತ್ಮವಿಶ್ವಾಸ, ರಾಷ್ಟ್ರಭಕ್ತಿ, ಸರಳ ಜೀವನ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದೆಂದು ಹೇಳಿದರು. ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಡಿ.ಎಸ್‌. ತಳವಾರ ಅವರು ಸ್ವಯಂ ಸೇವಕರು ನಮ್ಮ ಶಾಲೆಯಲ್ಲಿ ವಾಸ್ತವ್ಯ ಮಾಡಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷವಾಗಿದ್ದು, ಮಹಾ ತಪಸ್ವಿಗಳ ಭೂಮಿಯಲ್ಲಿ ಕೈಗೊಳ್ಳುತ್ತಿರುವ ತಮ್ಮ ಸೇವಾ ಕಾರ್ಯಗಳು ಸದಾಕಾಲ ಗ್ರಾಮಸ್ಥರಲ್ಲಿ ನೆನಪಿನಲ್ಲಿರುವಂತೆ ಕಾರ್ಯನಿರ್ವಹಿಸಿರೆಂದು ಹಾರೈಸಿದರು. 

ಎನ್‌.ಎಸ್‌.ಎಸ್‌. ಘಟಕದ ಕಾರ್ಯಕ್ರಮ ಅಧಿಕಾರಿ ಮತ್ತು ಶಿಬಿರಾಧಿಕಾರಿ ಪ್ರೊ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಏಳು ದಿನಗಳವರೆಗೆ ಶಿಬಿರದ ಮೂಲಕ ಕೈಗೊಳ್ಳುವ ಚಟುವಟಿಕೆಗಳನ್ನು ತಿಳಿಸುತ್ತ ‘ನನಗಲ್ಲ, ನಿನಗೆ’ ಧ್ಯೇಯವಾಕ್ಯದೊಂದಿಗೆ ಆಗಮಿಸಿರುವ ನಾವು ಗ್ರಾಮದ ಪ್ರತಿಯೊಬ್ಬರ ಸಹಾಯ-ಸಹಕಾರವನ್ನೂ ಅಪೇಕ್ಷಿಸುತ್ತೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ಸುಧಾ ಕೌಜಗೇರಿ ಸ್ವಯಂ ಸೇವಕರು ನಿಷ್ಠೆ, ಶ್ರದ್ಧೆ, ಪ್ರಾಮಾಣಿಕವಾಗಿ ಗ್ರಾಮದಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಗ್ರಾಮಸ್ಥರ ಮೆಚ್ಚುಗೆಯೊಂದಿಗೆ ಕಾಲೇಜಿಗೆ ಕೀರ್ತಿ ತರಬೇಕೆಂದು ಹೇಳಿದರು.  

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಶಿಬಿರಾಧಿಕಾರಿ ವಿಜಯಕುಮಾರ, ಮಹಾಂತೇಶ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಲಕ್ಷ್ಮಣ ಮುಳಗುಂದ, ಐಕ್ಯುಎಸಿ ಸಹಸಂಚಾಲಕ ಡಾ. ಮಂಜುನಾಥ ತ್ಯಾಲಗಡಿ ಸ್ವಯಂ ಸೇವಕರಿಗೆ ಶುಭಹಾರೈಸಿದರು. ಸ್ವಯಂ ಸೇವಕಿ ಜ್ಯೋತಿ ಈರಗಾರ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಸಹಶಿಬಿರಾಧಿಕಾರಿ ಭೀಮೇಶ ನಡೆಸಿಕೊಟ್ಟರು. ಐವತ್ತು ಸ್ವಯಂ ಸೇವಕರು, ಗ್ರಾಮದ ಹಿರಿಯರು, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.