ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಎನ್‌ಎಸ್‌ಎಸ್ ಶಿಬಿರ
ಖಾನಾಪುರ : ತಾಲೂಕಿನ ನಂದಗಡ ಗ್ರಾಮದ ಮಹಾತ್ಮಾ ಗಾಂಧಿ ಪಿಯು ಕಾಲೇಜಿನ ಸಭಾಗೃಹದಲ್ಲಿ ಇತ್ತಿಚೇಗೆ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ನಂದಗಡದ ಎನ್‌ಆರ್‌ಇ ಸೊಸೈಟಿಯ ಚೇರಮನ್ ಸಿ.ಜಿ.ವಾಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, 'ಇಂದಿನ ಯುವ ಪೀಳಿಗೆ ಗುರುಹಿರಿಯರ ಬಗ್ಗೆ ಗೌರವ, ಸಮಯದ ಸದ್ವಿನಿಯೋಗ, ನಿರಂತರ ಅಧ್ಯಯನ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮತ್ತು ಗುರಿ ಸಾಧಿಸುವ ಛಲವನ್ನು ಹೊಂದಿದಾಗ ಮಾತ್ರ ಪರಿಪೂರ್ಣತೆಯನ್ನು ಹೊಂದಲು ಸಾಧ್ಯ' ಎಂದು ಅಭಿಪ್ರಾಯ ಪಟ್ಟರು.ಇಂದಿನ ರಾಜಕೀಯ ವ್ಯವಸ್ಥೆ ಬದಲಾಗಬೇಕು. ಯುವಕರು ರಾಜಕಾರಣದತ್ತ ಒಲವು ತೋರಬೇಕು. ಕೃಷಿಕರನ್ನು ಗೌರವಿಸುವ ಕೆಲಸ ನಡೆಯಬೇಕು. ಎಲ್ಲದರಲ್ಲೂ ಪಾರದರ್ಶಕತೆ ಕಾಣುವಂತಾಗಬೇಕು. ಎನ್‌ಎಸ್‌ಎಸ್ ಶಿಬಿರದ ಧೇಯೋದ್ದೇಶಗಳು ಪೂರ್ಣಗೊಳ್ಳುವ ನಿಟ್ಟಿನಲ್ಲಿ ಪ್ರಾಧ್ಯಾಪಕರು, ಶಿಬಿರಾರ್ಥಿಗಳು ಶ್ರಮಿಸಬೇಕು ಎಂದು ಅವರು ಪ್ರತಿಪಾದಿಸಿದರು.ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎನ್‌ಆರ್‌ಇ ಸಂಸ್ಥೆಯ ಉಪಾಧ್ಯಕ್ಷರಾದ ಪಿ.ಕೆ.ಪಾಟೀಲ, ಅಡಿವೆಪ್ಪ ಕೋಟಿ, ಖಜಾಂಚಿ ಮಹಾಂತೇಶ ರಾಹೂತ, ಕಾರ್ಯದರ್ಶಿ ವಿಜಯ ಅರಗಾವಿ, ಪ್ರಾಚಾರ್ಯ ಎಂ.ಕೆ.ಭಜಂತ್ರಿ, ಪತ್ರಕರ್ತ ಪ್ರಸನ್ನ ಕುಲಕರ್ಣಿ, ಅಪ್ಪಾಜಿ ಸೇರಿದಂತೆ ಕಾಲೇಜಿನ ಶಿಬಿರಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಶಿಬಿರಾಧಿಕಾರಿ ಡಾ. ಎಸ್.ಡಿ.ಕಟಗಿ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಗೀತೆಯನ್ನು ಪ್ರಸ್ತುತಪಡಿಸಿದರು. ಉಪನ್ಯಾಸಕ ಪಿ.ಡಿ.ಹಿತ್ತಲಕೇರಿ ವಂದಿಸಿದರು.