ಕೃಷಿ ಕೂಲಿಕಾರರನ್ನು ಕಡೆಗಣಿಸಿದ ಬಜೆಟ್: ಕೂಲಿಕಾರರ ಸಂಘ ಆರೋಪ

ಬೆಂಗಳೂರು, ಮಾ 6,ರಾಜ್ಯದ ಗ್ರಾಮೀಣ ಕೃಷಿ ರಂಗದಲ್ಲಿ ಒಂದು ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿಕಾರರು ಕೆಲಸ ಮಾಡುತ್ತಿದ್ದು, ಇವರ ಹಿತ ರಕ್ಷಣೆ ಮಾಡುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಆಪಾದಿಸಿದೆ. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ದಿನೇ ದಿನೇ ಕೂಲಿಕಾರರ  ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವಲಯದಲ್ಲಿ ಬಹುತೇಕ ದಲಿತರರೇ ಹೆಚ್ಚಾಗಿದ್ದಾರೆ. ಇಂತಹ ಸಮುದಾಯಕ್ಕೆ ಸೇರಿದವರಾದ ಕೂಲಿಕಾರರನ್ನು  ಮುಖ್ಯಮಂತ್ರಿ ಅವರು ತಮ್ಮ ಬಜೆಟ್ನಲ್ಲಿ ಕಡೆಗಣಿರವುದು ಖಂಡನೀಯ ಎಂದರು.

ವಲಸೆ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರಲ್ಲಿ ಬಹುತೇಕರು ಅಮಾನವೀಯ ಪರಿಸ್ಥಿತಿಗಳಲ್ಲಿ ಜೀವಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರಿಗೆ ಯಾವುದೇ ಸಾಮಾಜಿಕ ಸುರಕ್ಷಾ ಸೌಲಭ್ಯ ಇಲ್ಲ. ಕೃಷಿ ಕೂಲಿಕಾರರಿಗೆ ಸ್ಥಳೀಯವಾಗಿ ವರ್ಷ ಪೂರ್ತಿ ಕೆಲಸಗಳು ದೊರೆಯುವುದಿಲ್ಲ. ಅದ್ದರಿಂದ ಅವರು ಗುಳೆ ಹೋಗುವ ಸಂದರ್ಭಗಳು ಹೆಚ್ಚಾಗುತ್ತಿವೆ. ಇಂತಹ ನಿರ್ಲಕ್ಷಿತ ಸಮುದಾಕ್ಕೆ ಸ್ಥಳೀಯವಾಗಿ ಕೆಲಸ ದೊರೆಯುವಂತಹ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ. ಕೂಲಿಕಾರರಿಗೆ ಸಮಗ್ರ ಕಾನೂನು ಮತ್ತು ಕೂಲಿಕಾರರ ಕಲ್ಯಾಣ ಮಂಡಳಿಯಂತಹ ಸಾಮಾಜಿಕ ಭದ್ರತೆ ಯೋಜನೆಗಳನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲು, ಸಾರ್ವತ್ರಿಕ ರೇಷನ್ ಪದ್ದತಿ ಮತ್ತು ನಿವೇಶನ ರಹಿತ ಬಡ ಕೂಲಿಕಾರರಿಗೆ ಮನೆಗಳನ್ನು ನಿರ್ಮಿಸುವಂತಹ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗಿಸಲು ಈ ಬಜೆಟ್ನಲ್ಲಿ ಅವಕಾಶ ಕಲ್ಪಿಸಿಲ್ಲ. ಬಗರ್ಹುಕುಂ ಸಾಗುವಳಿ ಸಕ್ರಮಗೊಳಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಚಂದ್ರಪ್ಪ ಹೊಸ್ಕೇರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.