ನವದೆಹಲಿ, ಫೆ 20, ಸೇವೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಮಹಾ ನಿರೀಕ್ಷಕರ ವಿರುದ್ದ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್ ಗೆ ಸುಪ್ರೀಂ ಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಆರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ನ್ಯಾಯಪೀಠ ಹೈಕೋರ್ಟ್ ಆದೇಶದ ಜಾರಿಗೆ ತಡೆಯಾಜ್ಞೆ ನೀಡಿದೆ.
ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ನ್ಯಾಯಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೈಕೋರ್ಟ್ ಅಸಾಧಾರಣ ಆದೇಶ ಹೊರಡಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರದ ಆರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು ಸೇವೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಹೈಕೋರ್ಟ್ ಮುಂದೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಜರಾಗಬೇಕಿತ್ತು. ಆದರೆ ಅವರು ನ್ಯಾಯಾಲಯದ ಮುಂದೆ ಹಾಜರಾಗದೆ, ತಮ್ಮ ಕಿರಿಯ ಅಧಿಕಾರಿಯನ್ನು ನ್ಯಾಯಾಲಯದ ಮುಂದೆ ಕಳುಹಿಸಿದ್ದರು. ಈ ಕ್ರಮಕ್ಕೆ ಕೆಂಡಾಮಂಡಲವಾಗಿದ್ದ ಹೈಕೋರ್ಟ್ ಡಿಜಿಪಿ ವಿರುದ್ದ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.