ರಾಜ್ಯಾದ್ಯಂತ ಸುಸೂತ್ರವಾಗಿ ನಡೆಯುತ್ತಿರುವ ಪದವಿ ಪೂರ್ವ ಪರೀಕ್ಷೆಗಳು; ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು,ಮಾರ್ಚ್.04, ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸಂತಸ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿ.ಯು.ಸಿ ಪರೀಕ್ಷಾ ವ್ಯವಸ್ಥೆಯನ್ನು ಸುರೇಶ್ ಕುಮಾರ್ ಪರಾಮರ್ಶಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜು, ಮಲ್ಲೇಶ್ವರಂ 13ನೇ ಕ್ರಾಸ್, 18ನೇ ಕ್ರಾಸ್ ಹಾಗೂ ಎಂ.ಇ.ಎಸ್ ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿದ ಸಚಿವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಇಂದು ಇತಿಹಾಸ, ಭೌತಶಾಸ್ತ್ರ, ಮತ್ತು ಗಣಿತ ಪರೀಕ್ಷೆಗಳು ನಡೆಯುತ್ತಿವೆ. ಇತಿಹಾಸ ವಿಷಯದಲ್ಲಿ 2,76,588, ವಿದ್ಯಾರ್ಥಿಗಳು, ಭೌತಶಾಸ್ತ್ರದಲ್ಲಿ 1,99,889 ಮತ್ತು ಗಣಿತ ವಿಷಯದಲ್ಲಿ 8002 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಡಾರೆ ರಾಜ್ಯಾದ್ಯಂತ 2,146 ಕೇಂದ್ರಗಳಲ್ಲಿ ಇಂದು ಈ ಪರೀಕ್ಷೆಗಳು ನಡೆಯುತ್ತಿವೆ. ಇಂದಿನ ಪರೀಕ್ಷಾ ಕಾರ್ಯದಲ್ಲಿ 32,887 ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಸೂಕ್ಷ್ಮ ವಲಯಗಳೆಂದು ಗುರುತಿಸಿರುವ ಆಯ್ದ ಕೇಂದ್ರಗಳಿಗೆ ವಿಶೇಷ ವೀಕ್ಷಕರನ್ನು ಈ ಬಾರಿ ನೇಮಕ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇಂದು ಬೆಂಗಳೂರಿನ ಮೂರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ. ವಿಶೇಷವೆಂದರೆ ಸುರೇಶ್ ಕುಮಾರ್ ಅವರು, ಎಪ್ಪತ್ತರ ದಶಕದಲ್ಲಿ ಪಿಯುಸಿ ಮತ್ತು ಬಿ.ಎಸ್.ಸಿ ಪರೀಕ್ಷೆಗಳಲ್ಲಿ ವಿದ್ಯಾಯಾರ್ಥಿಯಾಗಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದಿದ್ದ ಎಂಇಎಸ್ ಕಾಲೇಜಿನ ಕೊಠಡಿಗಳಿಗೆ ಭೇಟಿ ನೀಡಿದ್ದು, ಜವಾಬ್ಧಾರಿ ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಂದು ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದೆ, ಇಂದು ಪರೀಕ್ಷೆಗಳನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿರುವೆ ಎಂದು ತಮ್ಮ ಕರ್ತವ್ಯ ನೆನೆದು ಹರ್ಷ ವ್ಯಕ್ತಪಡಿಸಿದ್ದಾರೆ.