ಬೆಂಗಳೂರು, ಮಾರ್ಚ್.11, ಕೆಲ ಶಾಲೆಗಳು ಮತ್ತು ಪೋಷಕರು, ಪಾಥಮಿಕ ಶಾಲೆಯ ಎಲ್ಲಾ ತರಗತಿಗಳಿಗೆ ರಜೆ ಎಂದು ತಪ್ಪು ತಿಳಿದಿದ್ದಾರೆ. 6 ಮತ್ತು 7ನೇ ತರಗತಿ ಮಕ್ಕಗಳಿಗೆ ರಜೆ ಘೋಷಣೆ ಮಾಡಿಲ್ಲ. ಅಲ್ಲದೆ, ಪ್ರಾಥಮಿಕ ಶಾಲೆ ಮಕ್ಕಳ ಪರೀಕ್ಷೆ ವೇಳಾಪಟ್ಟಿ ಶೀಘ್ರವಾಗಿಯೇ ಪ್ರಕಟಿಸುವ ಸಂಬಂಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.ನಗರದ ಆನಂದ ರಾವ್ ವೃತ್ತದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಪದವಿ ಪೂರ್ವ ಕಾಲೇಜಿಗೆ ಹಾಗೂ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿಗೆ ಭೇಟಿ ನೀಡಿ ದ್ವಿತೀಯ ಪಿ.ಯು ಪರೀಕ್ಷಾ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಶಾಲೆಯ ಎಲ್ಲಾ ತರಗತಿಗಳಿಗೆ ರಜೆ ನೀಡಲಾಗಿದೆ ಎಂದು ಕೆಲ ಪೋಷಕರು ಮತ್ತು ಶಿಕ್ಷಕರು ಭಾವಿಸಿದ್ದು, 6 ಮತ್ತು 7ನೇ ತರಗತಿಗಳಿಗೆ ರಜೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಆರೋಗ್ಯ ಇಲಾಖೆ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ 1ರಿಂದ 5ರ ತರಗತಿ ಶಾಲಾ ಮಕ್ಕಳಿಗೆ ತುರ್ತು ರಜೆ ಘೋಷಣೆ ಮಾಡಲಾಗಿದೆ. ಆದರೆ, ಕೆಲ ಶಾಲೆಗಳು ತರಗತಿ ನಡೆಸುತ್ತಿದ್ದು, ಪೋಷಕರ ಮೇಲೂ ಒತ್ತಡ ಹಾಕುತ್ತಿದ್ದಾರೆ. ಈ ಸಂಬಂಧ ದೂರುಗಳು ಕೇಳಿಬಂದಿದ್ದು, ಖಾಸಗಿ ಸಂಸ್ಥೆಗಳ ಕಠಿಣ ಕ್ರಮಕ್ಕೆ ಮುಂದಾಗುವುದು ಹಾಗೂ ಸರ್ಕಾರದ ಆದೇಶ ಉಲ್ಲಂಘಿಸಿ, ಪ್ರಾಥಮಿಕ ಶಾಲೆಯ ತರಗತಿ ನಡೆಸುವ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಇಂದು ಎಷ್ಟು ಶಾಲೆಗಳು ತೆರೆದಿವೆ ಹಾಗೂ ಎಷ್ಟು ಶಾಲೆಗಳು ಬಂದ್ ಆಗಿವೆ ಎನ್ನುವ ಮಾಹಿತಿ ಸಂಗ್ರಹಿಸಲು ಬಿಇಒಗಳ ಮೂಲಕ ವರದಿ ಪಡೆಯಲಾಗುವುದು. ಬಳಿಕ, ಸರ್ಕಾರದ ಆದೇಶ ಉಲ್ಲಂಘಿಸಿರುವ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ಸಚಿವರು ನುಡಿದರು.ಬುಧವಾರ ರಾಜ್ಯದಲ್ಲೆಡೆ ಸುಮಾರು 4 ಲಕ್ಷದ 6 ಸಾವಿರದ 130 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದು, ಈ ಪೈಕಿ 2.46 ಲಕ್ಷ ವಿದ್ಯಾರ್ಥಿಗಳು ಲೆಕ್ಕಶಾಸ್ತ್ರ ವಿಷಯದಲ್ಲಿ, 2.8 ಲಕ್ಷ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಬರೀ 6 ಸಾವಿರ ವಿದ್ಯಾರ್ಥಿಗಳು ಮಾತ್ರ ಐಚ್ಛಿಕ ಕನ್ನಡ ವಿಷಯದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.