ಯತ್ನಾಳ ಹೇಳಿಕೆ ಕುರಿತು ಚರ್ಚೆಗೆ ಸ್ಪೀಕರ್ ಅವರಿಂದ ಅವಕಾಶ ನಿರಾಕರಣೆ: ಕಾಂಗ್ರೆಸ್ನಿಂದ ಇಂದೂ ವಿಧಾನಸಭೆಯಲ್ಲಿ ಧರಣಿ

ಬೆಂಗಳೂರು, ಮಾ.3, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಯಮ 363ದಡಿ ನೀಡಿದ್ದ ನೋಟಿಸ್ ಅನ್ನು ಸ್ಪೀಕರ್ ತಿರಸ್ಕರಿಸಿರುವುದಾಗಿ ಸದನದಲ್ಲಿ ಪ್ರಕಟಿಸಿದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಮುಂಭಾಗದ ಬಾವಿಗಿಳಿದು ಘೋಷಣೆ ಕೂಗಿ ಧರಣಿ ನಡೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು.ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಚ್.ಎಸ್.ದೊರೆಸ್ವಾಮಿ ವಿರುದ್ಧ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ನಿನ್ನೆಯಿಂದ ವಿಪಕ್ಷಗಳು ಸದನದಲ್ಲಿ ಧರಣಿ ನಡೆಸಿದ ಪರಿಣಾಮ ಕಲಾಪ ಸುಗಮವಾಗಿ ನಡೆದಿರಲಿಲ್ಲ. ಇಂದು ಕೂಡ ಬೆಳಗ್ಗೆ 11 ಗಂಟೆಗೆ ಕಲಾಪ ನಿರ್ಧಾರವಾಗಿತ್ತಾದರೂ ನಿಗದಿತ ಸಮಯಕ್ಕೆ ಕಲಾಪ ಆರಂಭಗೊಂಡಿರಲಿಲ್ಲ. ವಿಪಕ್ಷದೊಂದಿಗೆ ಹಲವು ಸುತ್ತಿನ ಮಾತುಕತೆಯ ಬಳಿಕ ಮಧ್ಯಾಹ್ನ 1.38ರ ಸುಮಾರಿಗೆ ಸದನ ಸಮಾವೇಶಗೊಂಡಿತು.ಆರಂಭದಲ್ಲಿ ಸಿದ್ದರಾಮಯ್ಯ ಮಾತನಾಡಿ, ಸದನ ಸುಗಮವಾಗಿ ನಡೆಯಬೇಕು. ಅದಕ್ಕೆ ನಮ್ಮ ಸಹಕಾರ ಇರಬೇಕು, ಯಾವುದೆ ಪ್ರತಿಷ್ಠೆಗೆ ಅಂಟಿಕೊಂಡು ಇರಬಾರದು ಎಂಬ ಉದ್ದೇಶದಿಂದ ಯತ್ನಾಳ್ ಹೇಳಿಕೆಯ ಬಗ್ಗೆ ಚರ್ಚೆ ನಡೆಸಲು ಸ್ಪೀಕರ್ ಅವರ ಸೂಚನೆಯಂತೆ ನೋಟಿಸ್ ನೀಡಿದ್ದೇವೆ. ನಿನ್ನೆ ಮಧ್ಯಾಹ್ನದ ಒಳಗೆ ಚರ್ಚೆ ನಡೆಸಿ ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ತಾವು ನೋಟಿಸ್ ಸರಿಯಿಲ್ಲ ಎಂದು ಸ್ಪೀಕರ್ ಹೇಳಿದ್ದರಿಂದ ಮತ್ತೊಂದು ನೋಟಿಸ್ ನೀಡಲಾಗಿದೆ. ನೋಟಿಸ್ನಲ್ಲಿ ನಾವು ಯತ್ನಾಳ್ ಅವರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಅವರು ನಿರ್ದಿಷ್ಟ ದಿನಾಂಕದಂದು ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ್ದೇವೆ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬಗ್ಗೆ ನಕಲಿ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ಯತ್ನಾಳ್ ಹೇಳಿದ್ದಾರೆ. ಇದು ಸದನದ ಹಕ್ಕುಚ್ಯುತಿಯೂ ಆಗುತ್ತದೆ. ನಿಯಮ 51 (ಎ) (ಬಿ)ಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಚರ್ಚೆಗೆ ಅವಕಾಶ ನೀಡಬೇಕು ಎಂದು ಹೇಳಿದರು.ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವವರನ್ನು ಸದನದಲ್ಲಿ ಇಟ್ಟುಕೊಂಡು ಕಲಾಪ ನಡೆಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯನ್ನು ನಿಯಮ 363ರಡಿ ಚರ್ಚಿಸಲು ಬರುವುದಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಉದಾತ್ತ ಮೌಲ್ಯಗಳನ್ನು ಗೌರವಿಸಬೇಕು ಎಂದು ನಿಯಮ 51 (ಎ) ಹೇಳಿದೆಯೇ ಹೊರತು ಇಲ್ಲಿ ವ್ಯಕ್ತಿಯನ್ನು ಹೇಳಿಲ್ಲ, ಹಾಗಾಗಿ ಈ ನಿಯಮದಡಿ ಚರ್ಚಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.ಈ ವೇಳೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ಎಚ್.ಎಸ್.ದೊರೆಸ್ವಾಮಿ ಅವರು ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ವಿರುದ್ಧ ಕೀಳಾಗಿ ಮಾತನಾಡಿದ್ದಾರೆ. ತಮ್ಮನ್ನು ಸೇರಿದಂತೆ ಈ ಸದನದ ಸದಸ್ಯರನ್ನು ಗೂಂಡಾಗಳು ಎಂದು ಕರೆದಿದ್ದಾರೆ ಎಂದು ಟೀಕಿಸಿದರು.ಬಳಿಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಮಹತ್ವವಿದೆ. ಅನೇಕ ಸಂದರ್ಭಗಳಲ್ಲಿ ವಾದ-ವಿವಾದಗಳು ಏನೇ ನಡೆದಿದ್ದರೂ ಈ ಸದನದ ಘನತೆ ಕಾಪಾಡುವಲ್ಲಿ ಎಲ್ಲರೂ ಶ್ರಮಿಸಿದ್ದಾರೆ. ಇದು ಎಲ್ಲರ ಜವಾಬ್ದಾರಿಯೂ ಆಗಿದೆ. ಶಿಷ್ಟಾಚಾರ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಗೌರವ ಕೊಡಬೇಕು. ನಿನ್ನೆಯಿಂದ ಕಲಾಪ ಸುಗಮವಾಗಿ ನಡೆಯಲಿಲ್ಲ. ಇಂದು ಬೆಳಗ್ಗೆ 11 ಗಂಟೆಗೆ ಸದನ ಕರೆಯಲಾಗಿತ್ತು. ಆದರೆ ಇಷ್ಟು ಹೊತ್ತಾದರೂ ಸದನ ಸಮಾವೇಶಗೊಂಡಿರಲಿಲ್ಲ. ಈ ಬಗ್ಗೆ ಯಾರಿಗೂ ಮಾಹಿತಿಯನ್ನೂ ನೀಡಿರಲಿಲ್ಲ. ಪ್ರಾಥಮಿಕ ಶಾಲೆಯಲ್ಲಿಯೂ ವಿಳಂಬ ಆದರೆ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಪ್ರಾಥಮಿಕ ಶಾಲೆಗಿಂತ ಕೆಳಮಟ್ಟಕ್ಕೆ ಇಳಿಯಬಾರದು. ಸದಸ್ಯರನ್ನು ಕತ್ತಲಲ್ಲಿ ಇಡಲಾಗಿದೆ. ಸದನ ಕರೆದು ಬಳಿಕ ಬೇಕಾದರೆ ಮುಂದೂಡಬೇಕಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಸ್ಪೀಕರ್ ಅವರಿಗೆ ಸಲಹೆ ನೀಡಿದರು.ಆಗ ಸ್ಪೀಕರ್ ಅವರು ರಾಮಸ್ವಾಮಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿ, ಇನ್ನು ಮುಂದೆ ಈಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಬಳಿಕ ಜೆಡಿಎಸ್ನ ಎಚ್.ಡಿ.ರೇವಣ್ಣ ಅವರಿಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು. ನಿನ್ನೆಯಿಂದ ಸದನ ಸರಿಯಾಗಿ ನಡೆದಿಲ್ಲ. ವಂದನಾ ನಿರ್ಣಯದ ಮೇಲಿನ ಚರ್ಚೆಗೂ ಸರಿಯಾಗಿ ಅವಕಾಶ ಸಿಕ್ಕಿಲ್ಲ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ ಎಚ್.ಎಸ್. ದೊರೆಸ್ವಾಮಿ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರು, ಹೌದು ದೊರೆಸ್ವಾಮಿ ರಾಜಕಾರಣಿ, ನೀವು ಸರಿಯಾಗಿ ಹೇಳಿದ್ದೀರಿ ಎಂದು ಘೋಷಣೆ ಕೂಗಿದರು. ಈ ವೇಳೆ ಸ್ಪಷ್ಟನೆ ನೀಡಿದ ರೇವಣ್ಣ, ದೊರೆಸ್ವಾಮಿ ರಾಜಕಾರಣಿಯಲ್ಲ, ಅವರು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುವವನಿದ್ದೆ, ಆದರೆ ಅದಕ್ಕೂ ಮಾತನಾಡಲು ಬಿಡುತ್ತಿಲ್ಲ. ನೀವಿಬ್ಬರೂ ಸೇರಿ ನಾಟಕವಾಡುತ್ತಿದ್ದೀರಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ವಿರುದ್ಧ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಮಧ್ಯೆ ಹಲವು ಬಾರಿ ಸ್ಪೀಕರ್ ಅವರು ವಿರೋಧ ಪಕ್ಷದ ಸದಸ್ಯರು ತಮ್ಮ ತಮ್ಮಆಸನಗಳಿಗೆ ತೆರಳಿ ಕಲಾಪ ನಡೆಸಲು ಅವಕಾಶ ನೀಡಬೇಕು ಎಂದು ಮಾಡಿದ ಮನವಿಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ಕಾಂಗ್ರೆಸ್ ಸದಸ್ಯರು ಯತ್ನಾಳ್, ಬಿಜೆಪಿ ಸರ್ಕಾರ, ಆರ್ಎಸ್ಎಸ್, ಸಂಘಪರಿವಾರದ ವಿರುದ್ಧ ಘೋಷಣೆ ಕೂಗಿದರು.ಬಳಿಕ ಸಿದ್ದರಾಮಯ್ಯ ನೀಡಿದ್ದ ನೋಟಿಸ್ಗೆ ರೂಲಿಂಗ್ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮ್ಮನ್ನು ಮನವೊಲಿಸಲು ನನಗೆ ಸಾಧ್ಯವಾಗುತ್ತಿಲ್ಲ. ಇಂದು ಬೆಳಗ್ಗೆ ಪ್ರತಿಪಕ್ಷ ನಾಯಕ ಕೊಟ್ಟ 363ಯಲ್ಲಿ ನೋಟಿಸ್ ಕೊಟ್ಟಿದ್ದಾರೆ. ವಿರೋಧ ಪಕ್ಷದ ನಾಯಕರು ನೀಡಿರುವ ಸೂಚನೆಯು ನಿಯಮ 363ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೂ ನಾನು ವಿವೇಚನಾಧಿಕಾರ ಬಳಸಿ ಚರ್ಚಿಸಲು ಒಪ್ಪಿದ್ದೆ. ಆದರೆ ಅವರು ಸದನದ ಸದಸ್ಯರೊಬ್ಬರ ಮೇಲೆ ಆಪಾದನೆ ಮಾಡುತ್ತಿರುವುದರಿಂದ ನಿಯಮ 328ರ ವೇರೆಗೆ ಸೂಚನೆಯನ್ನು ಕೊಡಬೇಕಾಗಿತ್ತು. ಮತ್ತು ಸೂಚನೆಯ ಪ್ರತಿಯೊಂದನ್ನು ಆ ಸದಸ್ಯರಿಗೆ, ಸಂಸದೀಯ ವ್ಯವಹಾರಗಳ ಸಚಿವರಿಗೆ ನೀಡಬೇಕಾಗಿತ್ತು. ಸೂಚನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಆಧರಿಸಿವೆ. ಕೌಲ್ ಮತ್ತು ಸಖ್ದರ್ ಅವರ ಪ್ರಾಕ್ಟೀಸ್ ಆಂಡ್ ಪ್ರಾಸೀಜರ್ ಆಫ್ ಪಾರ್ಲಿಮೆಂಟ್ ಪುಸ್ತಕದ ಪುಟ ಸಂಖ್ಯೆ 1024ರಲ್ಲಿ ವಿವರಿಸುವಂತೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯ ಆಧಾರದ ಮೇಲೆ ಮಾಡಲಾಗುವ ಆಪಾದನೆಗಳನ್ನು ಪ್ರಸ್ತಾಪಿಸಲು ಅನುಮತಿ ನೀಡುವುದಕ್ಕೆ ಅವಕಾಶವಿಲ್ಲ. ಮಾತ್ರವಲ್ಲ ಸದಸ್ಯರಿಗೆ ಶಿಕ್ಷೆಯನ್ನು ವಿಧಿಸುವ ಅಧಿಕಾರ ಸಭಾಧ್ಯಕ್ಷರು ಮತ್ತು ಸದನಕ್ಕೆ ಸೇರಿರುತ್ತದೆ. ಸೂಚನೆಯಲ್ಲಿ ಪ್ರಸ್ತಾಪಿಸಿರುವ ಘಟನೆಯು ಸದನದ ಹೊರಗಡೆ ನಡೆದಿರುವ ಘಟನೆಯಾಗಿದೆ. ಅಲ್ಲದೆ ಭಾರತ ಸಂವಿಧಾನದ ಅನುಚ್ಛೇ 51ಎ ಅಡಿಯಲ್ಲಿ ವಿವರಿಸಿರುವ ಮೂಲಭೂತ ಕರ್ತವ್ಯಗಳ ಅಲ್ಲಂಘನೆಯನ್ನು ಮಾನ್ಯ ಸದಸ್ಯರು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರು ನೀಡಿರುವ ಸೂಚನೆಯನ್ನು ಪರಿಗಣಿಸಲು ಬರುವುದಿಲ್ಲ. ಇದನ್ನು ತಿರಸ್ಕರಿಸಲಾಗಿದೆ ಎಂದು ತೀರ್ಪು ನೀಡಿದರು.ಈ ವೇಳೆ ಸಿದ್ದರಾಮಯ್ಯ, ಇದು ಪಕ್ಷಪಾತ ತೀರ್ಮಾನ, ಪ್ರಜಾಪ್ರಭುತ್ವ ವಿರೋಧಿ ನಡೆ, ಇದನ್ನು ವಿರೋಧ ಮಾಡುತ್ತೇವೆ. ಯತ್ನಾಳ್ ಅವರು ಇಡೀ ಸ್ವಾತಂತ್ರ್ಯ ಸಂಗ್ರಾಮವನ್ನೇ ಅವಮಾನ ಮಾಡಿದ್ದಾರೆ. ಅವರ ಹೇಳಿಕೆಯನ್ನು ಸರ್ಕಾರ ಮತ್ತು ಮುಖ್ಯಮಂತ್ರಿ ಬೆಂಬಲಿಸುತ್ತಿದ್ದಾರೆ. ಇದುವರೆಗೆ ಯತ್ನಾಳ ಹೇಳಿಕೆಯನ್ನು ಮುಖ್ಯಮಂತ್ರಿ ಖಂಡಿಸಿಲ್ಲ. ಎಲ್ಲರೂ ಮೌನವಾಗಿ ಬೆಂಬಲ ನೀಡುತ್ತಿದ್ದಾರೆ. ಇದುಸಂಘಪರಿಹಾರದವರು, ಆರ್ಎಸ್ಎಸ್ ನವರು ಹೇಳಿಸಿದ ಹೇಳಿಕೆಯಾಗಿದೆ ಎಂದು ಟೀಕಾಪ್ರಹಾರ ನಡೆಸಿದರು. ವಿಪಕ್ಷದ ಗದ್ದಲ ಹೆಚ್ಚಾದಾಗ ಸ್ಪೀಕರ್ ಅವರು ಸಂವಿಧಾನದ ಬಗ್ಗೆ ವಿಶೇಷ ಚರ್ಚೆ ನಡೆಸಬೇಕಿದೆ. ಮಧ್ಯಾಹ್ನ 3.30ಕ್ಕೆ ಮತ್ತೆ ಸದನ ಸಮಾವೇಶಗೊಳ್ಳಲಿದೆ ಎಂದು ಹೇಳಿ 3.30ಕ್ಕೆ ಮುಂದೂಡಿದರು