ಉತ್ತರಕನ್ನಡ ಜಿಲ್ಲೆಯ 8 ಕರ್ನಾಟಕ ನೇವಲ್ ಯುನಿಟ್ ಎನ್ ಸಿಸಿ ವಾರ್ಷಿಕ ತರಬೇತಿ ಶಿಬಿರ
ಕಾರವಾರ.ಜ. 23: ಉತ್ತರಕನ್ನಡ ಜಿಲ್ಲೆಯ 8 ಕರ್ನಾಟಕ ನೇವಲ್ ಯುನಿಟ್ ಎನ್ ಸಿಸಿ ವಾರ್ಷಿಕ ತರಬೇತಿ ಶಿಬಿರವನ್ನು ಕಾರವಾರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಕೊವಿಡ್ ಮುಂಜಾಗೃತೆಯೊಂದಿಗೆ ಒಟ್ಟು ಐದು ದಿನಗಳ ಕಾಲ ಶಿಬಿರವನ್ನು ಹಮ್ಮಿಕೊಂಡಿದ್ದು, ಕಳೆದ ಮೂರು ದಿನಗಳಿಂದ ಶಿಬಿರಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ, ಸೀಮನ್‌ಶಿಪ್, ನೇವಲ್ ಓರಿಯಂಟೇಶನ್, ನ್ಯಾವಿಗೇಷನ್, ಪರೇಡ್, ಯೋಗ ಸೇರಿದಂತೆ ಇನ್ನಿತರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಶಿಬಿರದಲ್ಲಿ ಕಾರವಾರ, ಗೋಕರ್ಣ, ಹೊನ್ನಾವರ, ಕುಮಟಾ ಭಾಗದ 67 ಪುರುಷ ಹಾಗೂ 27 ಮಹಿಳಾ ಕೆಡೆಟ್ ಸೇರಿ ಒಟ್ಟು 94 ಕೆಡೆಟ್ ಗಳು ಭಾಗವಹಿಸಿದ್ದಾರೆ. ಕೊವಿಡ್ ಆತಂಕದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ನಡೆಯುವ ವಾರ್ಷಿಕ ತರಬೇತಿ ಶಿಬಿರವನ್ನು ಈ ಬಾರಿ ಕೇವಲ ಐದು ದಿನಗಳವರೆಗೆ ಮಾತ್ರ ನಡೆಸಲಾಗುತ್ತಿದೆ. ಮಕ್ಕಳಲ್ಲಿ ನಾಯಕತ್ವದ ಗುಣ, ಕ್ರೀಡೆ, ದೇಶಾಭಿಮಾನ, ಸ್ವಯಂ ಸೇವೆಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ರಿತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಯಾವುದೇ ಎನ್ ಸಿಸಿ ಕೆಡೆಟ್ ಗಳು ಸರ್ಟಿಫಿಕೇಟ್ ಪಡೆಯಬೇಕಾದರೇ ಒಂದಾದರೂ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಇದೇ ಮೊದಲ ಬಾರಿಗೆ ಶಿಬಿರ ಆಯೋಜಿಸಿದ್ದು, ಪ್ರಸ್ತುತ ಶಿಬಿರದಲ್ಲಿ ಬಿ ಮತ್ತು ಸಿ ಸರ್ಟಿಫಿಕೇಟ್ ಕೆಡೆಟ್ ಗಳು ಭಾಗವಹಿಸಿದ್ದಾರೆ. ಎಲ್ಲರಿಗೂ ಕೊವಿಡ್ ಟೆಸ್ಟ್ ಮಾಡಿ ಪಾಲಕರಿಂದ ಒಪ್ಪಿಗೆ ಪಡೆದ ಬಳಿಕವೇ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಘಟಕದ ಕಮಾಂಡಿಂಗ್ ಅಧಿಕಾರಿ ಕಮಾಂಡರ್ ಸತ್ಯನಾಥ ಭೋಸಲೆ, ಅಧಿಕಾರಿಗಳಾದ ಲೆಫ್ಟಿನೆಂಟ್ ವಿ.ಆರ್. ಶಾನಭಾಗ, ಸಂತೋಷ್ ಗುಡಿಗರ್, ಗೀತಾ ತಲ್ವಾರ್ ಮತ್ತು ಎನ್‌ಸಿಸಿ ಘಟಕದ ನೌಕಾಪಡೆಯ ಸಿಬ್ಬಂದಿ ಸೊಹನ್‌ವೀರ್, ಎಸ್‌ಕೆ ಯಾದವ್, ಸಂಜೀವ್, ವೈ.ಎಲ್.ಬಿರಾದಾರ್, ಎಂ.ಕೆ.ಮೌರ್ಯ ಕೆಡೆಗಳಿಗೆ ತರಬೇತಿ ನೀಡುತ್ತಿದ್ದಾರೆ.