ಮೈಸೂರು, ಸೆ 8 ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಪ್ರಯತ್ನವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಈ ವರ್ಷದ ಡಿಸೆಂಬರ್ ವೇಳೆಗೆ ಅರಮನೆ ನಗರಿ ಮೈಸೂರು ಮತ್ತು ಪಾರಂಪರಿಕ ತಾಣ ಹಂಪಿ ನಡುವೆ ಡಬಲ್ ಡೆಕ್ಕರ್ ಬಸ್ ಸೇವೆಗಳನ್ನು ಪರಿಚಯಿಸಲಿದೆ. ಕೆಎಸ್ಟಿಡಿಸಿ ಮೂಲಗಳ ಪ್ರಕಾರ ಮೊದಲ ಹಂತದಲ್ಲಿ ಒಟ್ಟು ಆರು ಡಬಲ್ ಡೆಕರ್ ಬಸ್ಗಳ ಸೇವೆ ಒದಗಿಸಲಾಗುವುದು. ಲಂಡನ್ನ 'ಬಿಗ್ ಬಸ್' ಗಳ ಮಾದರಿಯಲ್ಲಿ ನಿರ್ಮಿಸಲಾದ ಈ ಬಸ್ಗಳಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ. ಕಳೆದ ವರ್ಷದ ದಸರಾ ಆಚರಣೆ ಸಂದರ್ಭದಲ್ಲಿ ಪರಿಚಯಿಸಲಾದ 'ಓಪನ್ ಬಸ್' ಯಶಸ್ಸಿನ ನಂತರ, ಕೆಎಸ್ಟಿಡಿಸಿ ಈಗ ಮೈಸೂರಿನಲ್ಲಿ ಡಬಲ್ ಡೆಕ್ಕರ್ ಬಸ್ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಮೈಸೂರು ಮತ್ತು ಹಂಪಿ ವೀಕ್ಷಣೆಗಾಗಿ ಆರು ಡಬಲ್ ಡೆಕ್ಕರ್ ಬಸ್ಗಳ ಸೇವೆ ಆರಂಭಿಸಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಐದು ಕೋಟಿ ರೂ. ತೆಗೆದಿರಿಸಿದ್ದರು. ಅಲ್ಲದೆ, ಡಬಲ್ ಡೆಕ್ಕರ್ ಬಸ್ಗಳ ಸೇವೆ ಒದಗಿಸಲುಬೆಂಗಳೂರು-ಮಂಗಳೂರು, ಬೆಂಗಳೂರು-ಚೆನ್ನೈ, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹೈದರಾಬಾದ್ ನಡುವೆ ಐದು ಸಂಭಾವ್ಯ ಮಾರ್ಗಗಳನ್ನು ಕೇಂದ್ರ ಸಾರಿಗೆ ಸಚಿವಾಲಯ ಗುರುತಿಸಿದೆ. ಆದರೆ ಈ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. 'ಓಪನ್ ಬಸ್' ಪರಿಕಲ್ಪನೆಯಡಿ, ಬೆಂಗಳೂರಿನಲ್ಲಿ ನಾಲ್ಕು ಓಪನ್-ಟಾಪ್ ಡಬಲ್ ಡೆಕ್ಕರ್ ಬಸ್ಗಳನ್ನು 2014 ರಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ನಿಗಮ (ಬಿಎಂಟಿಸಿ) ಪರಿಚಯಿಸಿತ್ತು. ಈ ಬಸ್ಗಳನ್ನು ಪ್ರವಾಸಿಗರಿಗೆ ನಗರ ವೀಕ್ಷಣೆಗೆ ಬಳಸಲಾಗಿತ್ತು. ಬಸ್ ಪರಿಕಲ್ಪನೆಗೆ ಅನೇಕ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಲ್ಕತ್ತಾದಲ್ಲಿ ಡಬಲ್ ಡೆಕ್ಕರ್ ಬಸ್ಸುಗಳು ಹಿಂದಿನಿಂದಲೂ ಇದ್ದು, ಇವು ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿವೆ ಎಂದು ತಜ್ಞರು ಹೇಳುತ್ತಾರೆ. 2006 ರಲ್ಲಿ ಕರ್ನಾಟಕ ಸರ್ಕಾರ ಮೈಸೂರು ದಸರಾಗೆ 16 ಕಿ.ಮೀ ದೂರ ಕ್ರಮಿಸಲು ಇಂತಹ ಬಸ್ಸುಗಳನ್ನು ಪರಿಚಯಿಸಿತ್ತು. ಅಂತಾರಾಷ್ಟ್ರೀಯ ದರ್ಜೆಯಲ್ಲಿ ವಿನ್ಯಾಸಗೊಳಿಸಲಾದ ಈ ಬಸ್ಸುಗಳು ಪ್ರವಾಸಿಗರಿಗೆ ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ, ಟೌನ್ ಹಾಲ್, ಕಾರಂಜಿ ಸರೋವರ, ಪ್ರಾದೇಶಿಕ ನೈಸರ್ಗಿಕ ವಸ್ತು ಸಂಗ್ರಹಾಲಯ, ಲಲಿತ ಮಹಲ್ ಅರಮನೆ, ರೈಲ್ವೆ ವಸ್ತು ಸಂಗ್ರಹಾಲಯ ಮತ್ತು ರೈಲ್ವೆ ನಿಲ್ದಾಣಗಳಂತಹ ಪ್ರವಾಸಿ ತಾಣಗಳನ್ನು ಕಣ್ತುಂಬಿಸುತ್ತವೆ.