ಕೈದಿಗಳ ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ಸಹಕಾರಿ: ಎಚ್‌. ಲಕ್ಷ್ಮೀಕಾಂತ್ ರೆಡ್ಡಿ

ಕೈದಿಗಳ ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ಸಹಕಾರಿ: ಎಚ್‌. ಲಕ್ಷ್ಮೀಕಾಂತ್ ರೆಡ್ಡಿ  Music helps alleviate mental stress among prisoners: H. Lakshmikanth Reddy

ಬಳ್ಳಾರಿ, ಸೆ. 29: ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ತಾವು ಮಾಡಿದ ತಪ್ಪುಗಳನ್ನು ಅರಿತುಕೊಂಡು, ಮತ್ತೆ ಅದೇ ತಪ್ಪುಗಳನ್ನು ಮಾಡದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು. ಕೈದಿಗಳ ಚಿಂತೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಗೀತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಎಚ್‌. ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.  

ಆಲಾಪ್ ಸಂಗೀತ ಕಲಾ ಟ್ರಸ್ಟ್‌ ವತಿಯಿಂದ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾಗಿದ್ದ ‘ಭಾವಸಂಗಮ ಸಾಂಸ್ಕೃತಿಕ ಮಾಲಿಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಜೈಲಿನಲ್ಲಿರುವ ಕೈದಿಗಳಿಗೆ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳ ಮೂಲಕ ಮಾನಸಿಕ ನೆಮ್ಮದಿ ಒದಗಿಸುವ ಪ್ರಯತ್ನ ಉತ್ತಮವಾದದ್ದು. ಇಂತಹ ಕಾರ್ಯಕ್ರಮಗಳು ಕೈದಿಗಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸಲು ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಲಾಪ್ ಸಂಗೀತ ಕಲಾ ಟ್ರಸ್ಟ್ನ ಜಡೇಶ್ ಎಮ್ಮಿಗನೂರು, ಸಂಸ್ಥೆಯು ಕಳೆದ ಸುಮಾರು 10 ವರ್ಷಗಳಿಂದ ಬಳ್ಳಾರಿ ಸೇರಿದಂತೆ ವಿವಿಧೆಡೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದೇ ರೀತಿಯಲ್ಲಿ ಕೇಂದ್ರ ಕಾರಾಗೃಹದಲ್ಲಿಯೂ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ ಜೈಲು ಅಧೀಕ್ಷಕ ವಿ. ಕೃಷ್ಣಮೂರ್ತಿ ಅವರಿಗೆ ಧನ್ಯವಾದ ಸಲ್ಲಿಸಿದರು.  

ಕೈದಿಗಳು ಚಿಂತೆ ಹಾಗೂ ಖಿನ್ನತೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಅವರಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ವಿಶೇಷವಾಗಿ ಸಂಗೀತ ಕೇಳುವುದರಿಂದ ಮನಸ್ಸಿಗೆ ಹಗುರವಾಗುತ್ತದೆ ಎಂದು ತಾರಾನಾಥ ಆಯುರ್ವೇದ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿ ಡಾ. ಎಸ್‌.ಎಂ. ಕೋಟ್ರೇಶ್ ಅಭಿಪ್ರಾಯಪಟ್ಟರು.