ಲತಾ ಜೀ ಹಾಡಿರುವ ಹಾಡುಗಳಲ್ಲಿ ನಿಮಗೆ ಇಷ್ಟವಾದ ಹಾಡು ಯಾವುದೆಂದು ಯಾರಲ್ಲಿಯಾದರೂ ಕೇಳಿದರೆ ಬಹುಶಃ ಒಂದೇ ಹಾಡನ್ನು ಗುರುತಿಸಿ ಹೇಳಲು ಯಾರಿಂದಲೂ ಸಾಧ್ಯವೇ ಇಲ್ಲ. ಒಂದಕ್ಕಿಂತ ಒಂದು ಅದ್ಭುತವಾದ ಹಾಡನ್ನು ಅವರು ಹಾಡಿದ್ದಾರೆ. ಅದೊಂದು ಕಂಠ ಕೋಗಿಲೆಯ ಕಂಠ. ಕೋಗಿಲೆಯ ದ್ವನಿ ಪೆಟ್ಟಿಗೆಯನ್ನು ಲತಾಜಿಯವರ ದ್ವನಿ ಪೆಟ್ಟಿಗೆಯಲ್ಲಿ ದೇವರು ಜೋಡಿಸಿ ಕಳಿಸಿಬಿಟ್ಟಿದ್ದಾನೆ ಎನ್ನಿಸದೇ ಇರದು. ಕೋಟಿ ಕೋಟಿ ಸಂಗೀತ ಪ್ರೇಮಿಗಳ ಹೃದಯ ಗೆದ್ದವರು. ಅವರಿಗೆ ಅವರೇ ಸಾಟಿ.
ಕಳೆದ ಸಾಲಿನಲ್ಲಿ ನಮ್ಮನ್ನು ತೊರೆದು ಹೋದ ಎಸ್.ಪಿ.ಬಿ. ನಂತರ ಸಂಗಿತ ಕ್ಷೇತ್ರದ ಮೇರು ಮಾತೆ ‘ಭಾರತ ರತ್ನ’ ಲತಾ ಮಂಗೇಶ್ಕರ್ ಕೂಡ ಇಂದು ನಡೆದುಬಿಟ್ಟರು. ಇಪ್ಪತೈದು ಸಾವಿರಕ್ಕೂ ಹೆಚ್ಚಿಗೆ ಹಾಡುಗಳನ್ನು ಹಾಡಿದ್ದ ಅವರು ಬರೋಬ್ಬರಿ 36 ಭಾಷೆಯಲ್ಲಿ ಹಾಡಿದ್ದಾರೆ ಎಂದರೆ ಸಾಮಾನ್ಯವಲ್ಲ.
ಲತಾಜಿ 1929ರ ಸೆಪ್ಟೆಂಬರ್ 28ರಂದು ಜನಿಸಿದವರು. ತನ್ನ 13ನೇ ವರ್ಷದಲ್ಲಿಯೇ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದವರು. ಪಂಡೀತ್ ದೀನನಾಥ ಮಂಗೇಶ್ಕರ್ ಅವರ ಮಗಳಾದ ಲತಾಜಿಯವರ ಮೊದಲ ಹೆಸರು ಹೇಮಾ. ಭಾವ್ ಬಂಧನ್ ಎನ್ನುವ ನಾಟಕದಲ್ಲಿ ಅಭಿನಯಿಸಿದ ನಂತರ ಅವರ ಹೆಸರು ಲತಾ ಎಂದು ಬದಲಾಗಿತ್ತು. ಲತಾಜಿ ಓಪಚಾರಿಕ ಶಿಕ್ಷಣವನ್ನು ಕಲಿತವರಲ್ಲ. ಒಮ್ಮೆ ಶಾಲೆಗೆ ಹೋದಾಗ ಶಿಕ್ಷಕರು ಬೈದರು ಎನ್ನುವ ಕಾರಣಕ್ಕೆ ಶಾಲೆಯ ಓದನ್ನು ಬಿಟ್ಟು ತಂದೆಯವರೊಟ್ಟಿಗೆ ನಾಟಕದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ನಾಲ್ಕು ಜನ ಮಕ್ಕಳಲ್ಲಿ ಇವರೇ ಹಿರಿಯರು. ತಂದೆಯವರು ಬಹುಬೇಗನೇ ತೀರಿಕೊಂಡಿದ್ದರಿಂದ ಇವರ ಮೇಲೆ ಇಡೀ ಸಂಸಾರದ ಹೊರೆ ಬಿದ್ದಿತ್ತು. ಶಾಸ್ತ್ರೀಯ ಸಂಗೀತ ಕಲಿಯಬೇಕು ಎನ್ನುವ ಅವರ ಆಸೆಯು ಹಾಗೆ ಉಳಿದು ಹನ್ನೆರಡು ವರ್ಷದ ಬಾಲೆ ಸಂಸಾರದ ಭಾರ ಹೊತ್ತರು.
ಮೊದಲು ಅವರು ಹಾಡಿದ್ದು ಮರಾಠಿ ಚಿತ್ರವೊಂದಕ್ಕೆ. ಆದರೆ ಆ ಹಾಡು ಚಿತ್ರದಲ್ಲಿ ಸೇರೆ್ಡ ಆಗಲಿಲ್ಲವಂತೆ. ನಂತರದಲ್ಲಿ 1947ರಲ್ಲಿ ಮೊದಲ ಬಾರಿಗೆ ಹಿಂದಿ ಚಿತ್ರಕ್ಕೆ ಹಿನ್ನೆಲೆ ಗಾಯಕಿಯಾಗಿ ಹಾಡಿದರು. ಪಾಂ ಲಾಗೂ ಕರ್ ಚೋರಿರೆ.. ಆಪ್ ಕೀ ಸೇವಾಮೇ... ಹೀಗೆ ಅನೇಕ ಹಾಡನ್ನು ಹಾಡುತ್ತಿದ್ದಂತೆ ಅವರ ಕಂಠ ಸಿರಿಗೆ ತಾಮುಂದು ತಾಮುಂದು ಎಂದು ಅವರಲ್ಲಿ ಹಾಡಿಸಲು ಹಲವಾರು ಸಂಗೀತ ನಿರ್ದೆಶಕರು ಬಂದು ನಿಂತರು.
ಅವರು ಕೇವಲ ಚಿತ್ರಗೀತೆಗಳನ್ನು ಮಾತ್ರ ಹಾಡಲಿಲ್ಲ. ಭಾವಗೀತೆ, ಭಕ್ತಿಗೀತೆ, ಭಜನ್, ಜಾನಪದ ಗೀತೆ, ಯುಗಳ ಗೀತೆ, ಕ್ಲಬ್ ಸಾಂಗ್ ವಿಭಿನ್ನವಾದ ಗೀತೆಗಳ ಪ್ರಕಾರದಲ್ಲಿ ಹಾಡಿದ್ದಾರೆ. 1967ರಲ್ಲಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಎನ್ನುವ ಕನ್ನಡ ಚಿತ್ರಕ್ಕೆ ಬೆಳ್ಳನೆ ಬೆಳಗಾಯಿತು ಮತ್ತು ಎಲ್ಲಾರೆ ಇರುತೀರೋ ಎಂದಾರೆ ಬರತೀರೋ ಎನ್ನುವ ಎರಡು ಹಾಡನ್ನು ಹಾಡಿದ್ದಾರೆ.
ಅದೊಂದು ಹಾಡು ಲತಾಜಿ ನವದೇಹಲಿಯ ಒಂದು ಸಮಾರಂಭದಲ್ಲಿ ಹಾಡುತ್ತಿದ್ದರೆ ವೇದಿಕೆಯ ಮೇಲಿದ್ದ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಲ್ಲಿ ನೀರಾಡಿತ್ತು. ಆ ಕಾರ್ಯಕ್ರಮ ಮುಗಿದ ನಂತರ ಲತಾಜಿಯವರನ್ನು ಮಾತಾಡಿಸಿದ ನೆಹರೂ ಅವರು ‘ಏನಮ್ಮ, ನಿಮ್ಮ ಹಾಡಿನಿಂದ ಇಂದು ನನ್ನನ್ನು ಅಳಿಸಿಬಿಟ್ಟೆಯಲ್ಲ’ ಎಂದಿದ್ದರಂತೆ. ಆ ಹಾಡು ಬೇರೆ ಯಾವುದು ಅಲ್ಲ ಇಂದಿಗೂ ನಮ್ಮೆಲ್ಲರ ಮನಮನದಲ್ಲಿರುವ ಹಾಡು. ಚೀಣಾ ಭಾರತ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣವನ್ನು ಅರ್ಿಸಿದರು. ಆ ನೆನಪಿನಾರ್ಥ ಪ್ರದೀಪ್ ಎನ್ನುವ ಕವಿ ಗೀತೆಯನ್ನು ರಚಿಸಿ ಸಿ. ರಾಮಚಂದ್ರ ಎನ್ನುವವರು ಸಂಗೀತ ನೀಡಿ 1963 ಜನವರಿ 27ರಂದು ಲತಾ ಅವರು ಹಾಡಿದ್ದರು. ಅದೇ “ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ”
ಇವರು ಕೇವಲ ಹಾಡುಗಾರರು ಮಾತ್ರವಲ್ಲ. ರಾಮ ರಾಮ ಪವ್ಹನಾ ಎನ್ನುವ ಸಿನೆಮಾಕ್ಕೆ ಸಂಗೀತ ನಿರ್ದೇಶನವನ್ನು ಸಹ ಮಾಡಿದ್ದಾರೆ. ಲೆಕಿನ್, ಕಾಂಚನ ಗಂಗಾ ಎನ್ನುವ ಸಿನೆಮಾ ನಿರ್ಮಾಣ ಮಾಡಿದ್ದಾರೆ. ಕಷ್ಟ ಎಂದವರಿಗೆ ನೆರವು ನೀಡಲು ಸದಾ ಮುಂದು. 2019ರಲ್ಲಿ ಮಹಾರಾಷ್ಟ್ರವು ನೆರೆಯಿಂದ ಅಲ್ಲಿಯ ಜನರು ಸಂತ್ರಸ್ಥರಾಗಿದ್ದು ನೋಡಿದ್ದೇವೆ. ಅಂದು ಅವರು ನೆರೆ ಪರಿಹಾರ ನಿಧಿಗೆ ಹನ್ನೊಂದು ಲಕ್ಷ ರೂ.ಗಳನ್ನು ನೀಡಿದ್ದರು.
ಒಬ್ಬ ವ್ಯಕ್ತಿಯ ಸಾಧನೆಗೆ ಪರಿಶ್ರಮ ಬಹಳ ಮುಖ್ಯ. ಕಷ್ಟದಲ್ಲೂ ಇಡೀ ಕುಟುಂಬವನ್ನು ಸಲಹುತ್ತ ತನ್ನ ಸಹೋದರಿಯರಿಗೆ ಶಿಕ್ಷಣ, ವಿವಾಹವನ್ನು ನೆರವೇರಿಸುತ್ತ ತಾನು ಏಕಾಂಗಿಯಾಗಿ ಬದುಕಿಬಿಟ್ಟವರು. ತಮ್ಮ ಧ್ವನಿಯ ಮೂಲಕವೇ ಅನೇಕ ಹೃದಯಗಳಲ್ಲಿ ಕನಸನ್ನು ಬಿತ್ತಿದವರು. ಆ ಕನಸಿನ ಮೂಲಕವೇ ತಮ್ಮ ಬದುಕಿನ ಅದೆಷ್ಟೋ ಭಾವಗಳನ್ನು ಬದಿಗೊತ್ತಿ ಹಾಡಿನಲ್ಲೆ ತಲ್ಲಿನರಾದವರು. ಆಗಾಗ ಇವರ ದ್ವನಿಯಲ್ಲಿ ವಿಶಾಧ ನೋವು ಬಂದು ಹೋಗುತ್ತಿದ್ದುದು ಅವರ ಹಾಡಿನ ಅಭಿಮಾನಿಗಳಿಗೆ ಗೊತ್ತಿಲ್ಲದ್ದಲ್ಲ.
ಒಮ್ಮೆ ಅಟಲ್ ಬಿಹಾರಿ ವಾಜಪೇಯಿ ಲತಾಜಿ ಎದುರು ಬದರಾಗಿದ್ದಾಗ ನಡೆದ ಸಂಭಾಷಣೆ. ವಾಜಪೇಯಿಯವರು ಹೇಳಿದರಂತೆ ನೀವು ತಿರುಗಿದರೆ ನಾನು ಎಂದು. ಈ ಮಾತಿನ ಅರ್ಥವಾಗದ ಲತಾಜಿ ಆಶ್ಚರ್ಯವಾಗಿ ಹಾಗೆಂದರೆ ಏನು ಎಂದು ಕೇಳಿದರಂತೆ. ನಿಮ್ಮ ಹೆಸರು ಟಂಖಿಂ ನನ್ನ ಹೆಸರು ಅಟಲ್ ಂಖಿಂಐ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದರಂತೆ.
ಮಿಲೇ ಸುರ್ ಮೇರಾ ತುಮ್ಹಾರಾ ಹಾಡನ್ನು ಯಾರು ತಾನೆ ಮರೆಯಲು ಸಾಧ್ಯ! ಜಿಯಾ ಜಲೆ ಜಾನ್ ಜಲೆ ಎನ್ನುವ ಹಾಡು ಈಗಲೂ ಮನದ ಪಟದಲ್ಲಿ ಅಚ್ಚೊತ್ತಿದೆ. ಹೋಗಯಾ ಹೈ ತುಜಕೋ ತೋ ಪ್ಯಾರ್ ಸಜನಾ ಎಂದು ಬಾಲ್ಯದಲ್ಲಿ ನಾವು ಗುನುಗಿದ್ದು ನೆನಪಲ್ಲಿದೆ. ದಿದಿ ತೇರಾ ದೇವರ್ ದಿವಾನ ಹಾಡು ಇನ್ನು ಹೊಸತರಂತೆ ಕಾಣಿಸುತ್ತದೆ. ಹೀಗೆ ಬರೆಯುತ್ತ ಹೋದರೆ ಸಾವಿರ ಸಾವಿರ ಹಾಡುಗಳು ನಮ್ಮ ಕಣ್ಣೆದುರು ಆ ಚಿತ್ರಗಳ ಸಹಿತ ಬಂದು ನಿಲ್ಲುತ್ತದೆ.
ಇಂದು ನಮ್ಮೊಂದಿಗೆ ಲತಾ ದೀದಿ ಇಲ್ಲ. ಆದರೆ ಅವರ ಕೋಗಿಲೆಯ ಸ್ವರ ಮಾತ್ರ ಭಾರತೀಯರ ಹೃದಯದಲ್ಲಿ ಅಚ್ಚೊತ್ತಿದೆ. ಅವರು ಹಾಡಿದ ಒಂದೊಂದು ಹಾಡು ಶಾಶ್ವತವಾಗಿದೆ. ಭಾರತವೇ ಹೆಮ್ಮೆ ಪಡುವ ಪುತ್ರಿ ನಮ್ಮ ಲತಾಜಿ. ನಿಮ್ಮ ಕಂಠ ಸಿರಿಗೆ ನನ್ನದೊಂದು ನುಡಿ ನಮನ.
- * * * -