ಸಚಿವ ಸ್ಥಾನಕ್ಕಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಭೇಟಿಯಾಗಿ ಒತ್ತಡ ಹಾಕಿದ ಮುರುಗೇಶ್ ನಿರಾಣಿ: ಸಿಗದ ಭರವಸೆ

ಬೆಂಗಳೂರು, ಜ.30, ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚಿಸಲು ದೆಹಲಿಗೆ ತೆರಳುವ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ, ಮುನಿರತ್ನ ಮತ್ತಿತರ ಕೆಲವು ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಈ ಹಿಂದೆಯೂ ಹಲವು ಬಾರಿ ಯಡಿಯೂರಪ್ಪ ಅವರನ್ನು ನಿರಾಣಿ ಭೇಟಿಯಾಗಿ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಿದ್ದರು. ಇಂದು ಬೆಳಗ್ಗೆ ಕೂಡ ಮತ್ತೊಮ್ಮೆ ಕ್ಷಮೆ ಕೇಳಿ ಸಚಿವ ಸ್ಥಾನಕ್ಕೆ ಒತ್ತಡ ಹಾಕಿದ್ದಾರೆ.

 ವಚನಾನಂದ ಸ್ವಾಮೀಜಿ ಹೇಳಿಕೆಗೆ ನಾನು ಕ್ಷಮೆ ಕೇಳುತ್ತೇನೆ, ದಯಮಾಡಿ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನನ್ನನ್ನು ಮರೆಯಬೇಡಿ, ನಾನು ಪಕ್ಷಕ್ಕಾಗಿ ಬಹಳ ಸೇವೆ ಸಲ್ಲಿಸಿದ್ದೇನೆ, ಜೊತೆಗೆ ನಾನು ಕೂಡ ಹಿರಿಯ ನಾಯಕನಿದ್ದೇನೆ, ಹೀಗಾಗಿ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ, ಈ ಬಾರಿ ನನಗೆ ಮಂತ್ರಿ ಸ್ಥಾನ ಕೊಡಿ, ಸಮುದಾಯದಲ್ಲೂ ಕೂಡ ನಾನು ಹಿರಿಯ ನಾಯಕನಾಗಿದ್ದೇನೆ ದಯಮಾಡಿ ನನ್ನನ್ನು ಪರಿಗಣಿಸಿ ಎಂದು ನಿರಾಣಿ ಯಡಿಯೂರಪ್ಪ ಅವರಿಗೆ ಕೋರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುರುಗೇಶ್ ನಿರಾಣಿಗೆ ಯಾವುದೇ ಭರವಸೆ ನೀಡದೇ ಮುಖ್ಯಮಂತ್ರಿ ತೆರಳಿದ್ದಾರೆ. ಇದರಿಂದ ಬೇಸರಗೊಂಡಿರುವ ಮುರುಗೇಶ್ ನಿರಾಣಿ ಅವರನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಮ್ಮ ಕಾರಿನಲ್ಲಿ ಕರೆದುಕೊಂಡು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.ಇದಕ್ಕೂ ಮೊದಲು ಶಾಸಕ ಮುನಿರತ್ನ ಕೂಡ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ತಮ್ಮ ಸ್ನೇಹಿತರಾದ ಎಸ್‌.ಟಿ.ಸೋಮಶೇಖರ್, ಬೈರತಿ ಬಸವರಾಜು ಅವರ ಪರವಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅವರ ಮೇಲಿರುವ ಮತದಾರರ ಗುರುತಿನ ಚೀಟಿ ಪ್ರಕರಣದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಸಂಪುಟ ವಿಸ್ತರಣೆ ಮತ್ತು ಹಾಲಿ ಉಪ ಮುಖ್ಯಮಂತ್ರಿಗಳು ಮುಂದುವರಿಯುವ  ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧ, ಸಂಪುಟ ವಿಸ್ತರಣೆ ವಿಳಂಬವಾಗಿಲ್ಲ, ಇಂದು ಯಡಿಯೂರಪ್ಪನವರು ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡಿ ಚರ್ಚೆ ಮಾಡುತ್ತಾರೆ, ಸಂಪುಟ ವಿಸ್ತರಣೆಗೆ ದಿನಾಂಕ ಇನ್ನೂ ಸಿಕ್ಕಿಲ್ಲ, ನಿನ್ನೆ ಮುಖ್ಯಮಂತ್ರಿ ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ನಡೆದುಕೊಳ್ಳುತ್ತಾರೆ. ಸೋತವರಿಗೆ ಸಚಿವ ಸ್ಥಾನದ ಬಗ್ಗೆ ಪಕ್ಷದ‌ ವರಿಷ್ಠರು ತೀರ್ಮಾನಿಸ್ತಾರೆ ಎಂದು ತಿಳಿಸಿದರು.