ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್....
ಇದನ್ನು ನೃಪತುಂಗ ತನ್ನ ಕವಿರಾಜಮಾರ್ಗದಲ್ಲಿ ಹೇಳಿದ್ದು ಕ್ರಿ. ಶಕ. 814-877 ರ ಅವಧಿಯಲ್ಲಿ. ಅಂದರೆ ಒಂಬತ್ತನೇ ಶತಮಾನದಲ್ಲಿ. ಕನ್ನಡ ನಾಡಿನ ಉತ್ತರ ಗಡಿ ಗೋದಾವರಿಯು ಮಹಾರಾಷ್ಟ್ರದ ಉತ್ತರದ ಕೊನೆ ಜಿಲ್ಲೆಯಾದ ನಾಸಿಕದ ನಾಸಿಕ್ ನಗರದ ಪಕ್ಕದಲ್ಲಿ ಹರಿಯುವ ಗೋದಾವರಿ ನದಿಯೇ. ಖ್ಯಾತ ಸಂಶೋಧಕ ಡಾ. ಚಿ.ಮೂ ಹೇಳುವಂತೆ ಇಂದಿಗೂ ಆ ಜಿಲ್ಲೆಯ ಮರಾಠಿ ಜನರು ನಾಯಿಗಳಿಗೆ “ಕರಿಯ” ಎಂಬ ಹೆಸರಿಡುತ್ತಾರಲ್ಲದೆ” ಅಣ್ಣ” ಇತ್ಯಾದಿ ಶಬ್ದ ಬಳಸುತ್ತಾರೆ. ಗೋಧೂರ್ ಕೋಟೂರ್ ಮೊದಲಾದ ಇತ್ಯಾದಿ ಸ್ಥಳನಾಮಗಳು ಅಲ್ಲಿವೆ. ಅದೇ ಜಿಲ್ಲೆಯ ಹಟ್ಕಾರ್ ಕಾನಡಿ ಎಂಬ ಜನಾಂಗದವರು ಮಾತಾಡುವ ಕನ್ನಡ ಹಳೆಗನ್ನಡಕ್ಕೆ ಸಮೀಪವಾಗಿದೆ(ಕಾನಡೀ - ಕನ್ನಡ, ಹಟಕಾರ- ಹಟ್ಟಿಕಾರ). ಪಾಟೀಲ ಪುಟ್ಟಪ್ಪನವರು ತಮ್ಮ ಎಲ್ಕ ಭಾಷಣಗಳಲ್ಲೂ ಮಹಾರಾಷ್ಟ್ರದ ತುಂಬ ಇರುವ ಇಂತಹ ನೂರಾರು ಹಳ್ಳಿಗಳ ಹೆಸರನ್ನು ಕಂಠಪಾಠವಾಗಿ ಹೇಳುತ್ತಿದ್ದರು. ಅಷ್ಟೇ ಅಲ್ಲ, ಮಹಾರಾಷ್ಟ್ರದ ತುಂಬ ಸಿಕ್ಕ ನೂರಾರು ಕನ್ನಡ ಶಾಸನಗಳ ಬಗ್ಗೆ ಹೇಳುತ್ತಿದ್ದರು. ನಾಗಪುರ ಜಿಲ್ಲೆಯಲ್ಲಿ ಗೋಲರ್, ಹೋಲ್ಕರ್ (ಗೊಲ್ಲರು/ ಹೊಲೆಯರು) ಎನ್ನುವ ವರ್ಗದ ಜನರು ಮಾತಾಡುವದು ಕನ್ನಡವನ್ನೇ.
ಅಷ್ಟೇ ಏಕೆ, ಆಂಧ್ರ್ರದೇಶದ ಕರ್ನೂಲು, ತಮಿಳುನಾಡಿನ ಸೇಲಂ, ಧರ್ಮಪುರಿ, ನೀಲಗಿರಿ, ಇಂದಿನ ಕೇರಳದ ಕಾಸರಗೋಡು, ಹಾಗೆಯೇ, ಜತ್ತ, ಸೊಲ್ಲಾಪುರ ಮೊದಲಾದವುಗಳು ಸಹ ಹಿಂದೆ ಕನ್ನಡ ಪ್ರದೇಶವೇ ಆಗಿದ್ದವು.
ಕರ್ನಾಟಕ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ. ನೆರೆಯ ನೇಪಾಳವನ್ನು ನಾಲ್ಕುನೂರು ವರ್ಷ ಆಳಿದವರು ಕರ್ನಾಟಕದಿಂದ ಹೋದ “ಕರ್ನಾಟ ವಂಶ”ದ ರಾಜರು. ನಾನ್ಯದೇವ ಎಂಬಾತ ನೇಪಾಳ ಬಿಹಾರಗಳೆರಡನ್ನೂ ಆಳಿದ್ದ.
ವಾಸ್ತವವಾಗಿ ಹಿಂದಿನ ಕರ್ನಾಟಕ ಇಂದಿನ ಕರ್ನಾಟಕಕ್ಕಿಂತ ಮೂರು ಪಟ್ಟು ದೊಡ್ಡದಾಗಿತ್ತು.
- ಎಲ್. ಎಸ್. ಶಾಸ್ತ್ರಿ