ಬಹುಭಾಷಾ ವಿದ್ವಾಂಸ ಡಾ. ರಾಳಪಲ್ಲಿ ಸುಂದರಂ

ಬಹುಭಾಷಾ ವಿದ್ವಾಂಸರಾದ ರಾಳಪಲ್ಲಿ ಸುಂದರಂ ಅವರು ತೆಲುಗು ಮತ್ತು ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧಿ ಪಡೆದವರು. ಸಾಹಿತ್ಯ, ಜಾನಪದ, ವಿಮರ್ಶೆ, ಸಂಶೋಧನೆ, ಭಾಷಾ ವಿಜ್ಞಾನ, ಅನುವಾದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ವಿಶೇಷ ಪಾಂಡಿತ್ಯಗಳಿಸಿಕೊಂಡಿದ್ದಾರೆ. ಎಲೆಮರೆ ಕಾಯಿಯಂತೆ ಇದ್ದುಕೊಂಡು ಕನ್ನಡ-ತೆಲುಗು ಭಾಷೆಗಳಿಗೆ ಸಂಬಂಧಿಸಿದಂತೆ ಅನೇಕ ಉತ್ತಮ ಕೃತಿಗಳನ್ನು ಅನುವಾದಿಸುವುದರ ಮೂಲಕ ಎರಡು ಭಾಷೆಗಳ ನಡುವೆ ಸಾಹಿತ್ಯ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕನ್ನಡ ಸಾಹಿತ್ಯದ ಪ್ರಾಚೀನ ಕೃತಿಗಳನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡುವುದರ ಮೂಲಕ ಕನ್ನಡ ಸಾಹಿತ್ಯದ ಕಂಪನ್ನು ದೇಶ, ವಿದೇಶಗಳಲ್ಲಿ ಪಸರಿಸುವ ಕೆಲಸ ಮಾಡುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿಕೊಂಡಿದ್ದಾರೆ.  

ರಾಳಪಲ್ಲಿ ಸುಂದರಂ ಅವರು ಆಂಧ್ರ​‍್ರದೇಶದ ನೆಲ್ಲೂರಿನಲ್ಲಿ 1948ರ ಎಪ್ರೀಲ್ 21ರಂದು ಜನಿಸಿದರು. ತಂದೆ ಪಿಚ್ಚಯ, ತಾಯಿ ಸುಶೀಲಮ್ಮ. ರಾಳಪಲ್ಲಿ ವೆಂಕಟ ಸುಬ್ರಹ್ಮಣ್ಯ ಸುಂದರಂ ಎಂಬುದು ಅವರ ಪೂರ್ಣ ಹೆಸರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನೆಲ್ಲೂರಿನಲ್ಲೇ ಪಡೆದರು. ಅವರು ಮೂಲತಃ ಪ್ರಾಣಿಶಾಸ್ತ್ರದ ಪದವೀಧರರಾಗಿದ್ದು, ಸಾಹಿತ್ಯದಲ್ಲಿಯ ಆಸಕ್ತಿಯಿಂದ 1969ರಲ್ಲಿ ಮದ್ರಾಸ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂ.ಎ. ತೆಲುಗು ಪದವಿ ಪಡೆದರು. ಕನ್ನಡ ಭಾಷೆಯ ಬಗ್ಗೆ ಅತೀವವಾದ ಆಸಕ್ತಿ ಹೊಂದಿದ್ದ ಅವರು 1974ರಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಅಲ್ಲದೇ 1986ರಲ್ಲಿ ಮೈಸೂರ ವಿಶ್ವವಿದ್ಯಾಲಯದಿಂದ ಎಂ.ಎ. ಸಂಸ್ಕೃತ ಪದವಿಯನ್ನು ಪಡೆದರು. ಅವರು 1973ರಲ್ಲಿ ಮೈಸೂರ ವಿಶ್ವವಿದ್ಯಾನಿಲಯದಿಂದ ‘ತೆಲುಗು ಮತ್ತು ಕನ್ನಡ ಜನಪದ ಗೀತೆಗಳು’ ಎಂಬ ಪ್ರೌಢ ಪ್ರಬಂಧಕ್ಕಾಗಿ ಪಿಎಚ್‌.ಡಿ. ಪದವಿಯನ್ನು ಪಡೆದರು. ಇದೇ ವಿಶ್ವವಿದ್ಯಾನಿಲಯದಿಂದ 1982ರಲ್ಲಿ ‘ಆಂಧ್ರದ ಜನಪದ’ ಎಂಬ ಪ್ರಬಂಧಕ್ಕಾಗಿ ಡಿ.ಲಿಟ್‌. ಪದವಿಯನ್ನು ಪಡೆದರು.  

ರಾಳಪಲ್ಲಿ ಸುಂದರಂ ಅವರು 1970ರಲ್ಲಿ ಕರ್ನಾಟಕದ ಚಿಂತಾಮಣಿಯಲ್ಲಿ ಅಧ್ಯಾಪಕ ವೃತ್ತಿಗೆ ಸೇರಿದರು. ನಂತರ ಅವರು 1973ರಲ್ಲಿ ಮೈಸೂರ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾದರು. ಅದೇ ಸಂಸ್ಥೆಯಲ್ಲಿ ನಿರಂತರವಾಗಿ 35 ವರ್ಷಗಳ ಕಾಲ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು 1990-93ರ ಅವಧಿಯಲ್ಲಿ ತೆಲುಗು ವಿಶ್ವವಿದ್ಯಾನಿಲಯದ ರಾಜಮಹೇಂದ್ರಿಯ ಜಾನಪದ ವಿಭಾಗದ ಮುಖ್ಯಸ್ಥರಾಗಿ ಮತ್ತು ಸಾಹಿತ್ಯ ಪೀಠದ ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಅವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಕ ರಂಗದ ನಿರ್ದೇಶಕರಾಗಿ, ದಕ್ಷಿಣ ಭಾರತದ ಅನೇಕ ವಿಶ್ವವಿದ್ಯಾನಿಲಯಗಳ ಅಧ್ಯಯನ ಮಂಡಳಿಗಳ ಸದಸ್ಯರಾಗಿ, ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ.  

ಡಾ ಸುಂದರಂ ಅವರು ತಮ್ಮ ಹತ್ತನೇ ವಯಸ್ಸಿನಲ್ಲೇ ಕಾದಂಬರಿಗಳನ್ನು ಓದುವ ಅಭ್ಯಾಸ ಮಾಡಿಕೊಂಡಿದ್ದರು. ಕಾಲೇಜು ಸೇರುವ ಹೊತ್ತಿಗೆ ಸಂಪೂರ್ಣವಾಗಿ ಸಾಹಿತ್ಯಾಭಿರುಚಿ ಬೆಳೆಸಿಕೊಂಡಿದ್ದರು. ಅವರು 18ನೇ ವಯಸ್ಸಿನಲ್ಲಿಯೇ ‘ವಿದ್ಯಾರ್ಥಿ’ ಎಂಬ ಕಾದಂಬರಿಯನ್ನು ರಚಿಸಿದ್ದರು. ಅವರು ತೆಲುಗು, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. 10 ಕವನ ಸಂಕಲನಗಳು, 07 ಕಾದಂಬರಿಗಳು, 01 ಕಥಾ ಸಂಕಲನ, 06 ವಿಮರ್ಶಾ ಕೃತಿಗಳು, 11 ಜಾನಪದ ಕೃತಿಗಳು 05 ಜೀವನಚರಿತ್ರೆಗಳು, ಭಾಷಾ ವಿಜ್ಞಾನ ಕುರಿತ 02 ಕೃತಿಗಳು ಹೀಗೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ದಿಗಂಬರು ಕವಿಗಳು, ದಿಗಂಬರ ಕಾವ್ಯ, ಗೊರಿಲ್ಲಾ, ಪಿಟಿಲು ರಾಗಗಳ ಡಜ್ಹನ್, ಅಕ್ಷರದಲ್ಲಿ ಅಂತರಿಕ್ಷ, ಅನೀಲ ಆರಾಧನಾ ಮುಂತಾದ ಕವನ ಸಂಕಲನಗಳು, ಸಾವಿರ ಹೆಡೆಗಳು, ಸಂಗವಿಜಯ, ವಿದ್ಯಾರ್ಥಿ, ಜೋಗತಿಯರು ಕಾದಂಬರಿಗಳು, ಬಿರುಗಾಳಿ ಕಥಾಸಂಕಲನ, ಮಹಾಭಾರತದ ನೀತಿ ಕಥೆಗಳು, ತೆಲುಗು ಮತ್ತು ಕನ್ನಡ ಜಾನಪದ ಗೀತೆಗಳು, ಆಂಧ್ರುಲ ಜಾನಪದ ವಿಜ್ಞಾನ, ಜಾನಪದ ಸಾಹಿತ್ಯದ ಮೂಲತತ್ವಗಳು, ಕರ್ನಾಟಕಾಂದ್ರ ಯಕ್ಷಗಾನ ಸಮೀಕ್ಷೆ, ಆಂದ್ರ​‍್ರದೇಶಜನಪದ, ಕ್ರೀಡಾಭಿರಾಮ, ಕಟಮರಾಜನ ಕಥೆ, ದೇಸಿ ಆಹಾರ ಪದ್ಧತಿ ಎಂಬ ಜಾನಪದ ಕೃತಿಗಳು, ಭಾಷೆ ಮತ್ತು ಭಾಷಾ ವಿಜ್ಞಾನ, ಧ್ವನಿ ವಿಜ್ಞಾನ, ತೆಲುಗು ಭಾಷೆ ಮತ್ತು ಸಾಹಿತ್ಯ , ಸಂಶೋಧನೆ ಮತ್ತು ತತ್ವವಿಧಾನ, ಸಂಶೋಧನೆ ಪಥ, ಶಸ್ತ್ರ ಸಾಹಿತ್ಯ, ದೇಶಿ-ದೇಶಿಯತೆ-ದೇಶಿವಾದ, ಶಾಸ್ತ್ರೀಯ ಕನ್ನಡ ಭಾಷೆ, ಕವಿರಾಜಮಾರ್ಗಂ, ಉದಯಾದಿತ್ಯಲಂಕಾರಂ, ಸುಂದರಂ ಕೃತಿ ಸಂಪುಟ-01 ಸಂದರಂ ಕೃತಿ ಸಂಪುಟ 02 ಎಂಬ ಕೃತಿಗಳನ್ನು ಅವರು ನೀಡಿದ್ದಾರೆ.  

ಕನ್ನಡ, ತೆಲುಗು, ತಮಿಳು, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗಳ ಮೇಲೆ ಅಪಾರ ಹಿಡಿತವಿರುವ ಡಾ.ರಾಳಪಲ್ಲಿ ಸುಂದರಂ ಅವರು ಕನ್ನಡವನ್ನು ಅಂತರಾಷ್ಟ್ರೀಯ ವಿದ್ವಾಂಸರ ನಡುವೆ ಜನಪ್ರಿಯಗೊಳಿಸುತ್ತಿರುವ ಅಪೂರ್ವ ವಿದ್ವಾಂಸರು. ಕವಿರಾಜ ಮಾರ್ಗಂ, ಗದಾಯುದ್ಧ ಮತ್ತು ವಡ್ಡಾರಾಧನೆ ಕೃತಿಗಳು ಇಂಗ್ಲೀಷ್ ಭಾಷೆಗೆ ಅನುವಾದಗೊಳ್ಳಲು ಅವರೇ ಪ್ರಮುಖರಾದರು. 1972ರಷ್ಟು ಹಿಂದೆಯೇ ತೆಲುಗಿನ ದಿಗಂಬರ ಕಾವ್ಯವನ್ನು ಕನ್ನಡಕ್ಕೆ ತಂದು ಬೆಂಗಳೂರಿನ ಕೊಳಚೆ ಪ್ರದೇಶವೊಂದರಲ್ಲಿ ಲೈಂಗಿಕ ಕಾರ್ತಕರ್ತೆಯರಿಂದ ಬಿಡುಗಡೆ ಮಾಡಿಸಿದ ಸುಂದರಂ ಅವರು ಮಾಟಮಂತ್ರ ಮೋಡಿಯ ಬಗ್ಗೆ ಬರೆದ ಪುಸ್ತಕದ 25ಸಾವಿರ ಪ್ರತಿಗಳು ಮಾರಾಟವಾಗಿವೆ. ಅವರ ಗದಾಯುದ್ಧ, ವಡ್ಡಾರಾಧನೆ ಇಂಗ್ಲೀಷ್ ಅನುವಾದದ ಎರಡನೆಯ ಮುದ್ರಣವನ್ನು ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆ ‘ರೌಟ್ಲೆಡ್ಜ್‌’ನವರು ಹೊರತಂದಿದ್ದಾರೆ. ಛಂದಸ್ಸಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಉಪಲಬ್ಧವಿರುವ ಮೊದಲ ಛಂಧೋಗ್ರಂಥ. ನಾಗವರ್ಮನ ‘ಛಂದೋಂಬುಧಿಯನ್ನು ಸಾಹಿತಿ ಡಾ.ಸುಂದರಂ ಅವರು ಮಂಗಳೂರಿನ ಅಮ್ಮೆಲ್ ಶರೋನ್ ಅವರೊಟ್ಟಿಗೆ ಸೇರಿ ಇಂಗ್ಲೀಷ್‌ಗೆ ಅನುವಾದಿಸಿದ್ದಾರೆ, ‘ದ ಓಪನ್ ಆಫ್ ಪ್ರೊಸೋಡಿ’ ಹೆಸರಿನ ಗ್ರಂಥವನ್ನು ಕಲುಬುರ್ಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಶಾಸ್ತ್ರೀಯ ಅಧ್ಯಯನ ಕೇಂದ್ರವು ಪ್ರಕಟಿಸಿದೆ. ಈ ಗ್ರಂಥವನ್ನು ‘ಛಂದಸ್ಸಿನ ಸಮುದ’್ರವೆಂತಲೂ ಕರೆಯುತ್ತಾರೆ. 

ಸಾವಿರಹೆಡೆಗಳು ಎಂಬ ಕಾದಂಬರಿ ವಿಶ್ವನಾಥ ಸತ್ಯನಾರಾಯಣ ಅವರ ವೇಯಿಪಡುಗಲ ಎಂಬ ತೆಲುಗು ಕಾದಂಬರಿಯ ಅನುವಾದವಾಗಿದ್ದು, ಸಾವಿರಕ್ಕೂ ಹೆಚ್ಚು ಪುಟಗಳುಳ್ಳ ಬೃಹತ್ ಕಾದಂಬರಿಯಾಗಿದೆ. ಸಂಗ ವಿಜಯ ಕಾದಂಬರಿ ತೆಲುಗಿನ ಉನ್ನತ ಲಕ್ಷ್ಮೀನಾರಾಯಣ ಅವರ ಮಾಲಪಲ್ಲಿ ಎಂಬ ತೆಲುಗು ಕಾದಂಬರಿಯ ಕನ್ನಡ ಅನುವಾದವಾಗಿದೆ, ಪಾಲಗುಮ್ಮಿ ಪದ್ಮರಾಜು ಅವರ ಬಿರುಗಾಳಿ ಕಥಾ ಸಂಕಲನವು ಅನೇಕ ಉತ್ತಮ ಕಥಾ ವಸ್ತುವುಳ್ಳ ಕಥೆಗಳ ಸಂಕಲನವಾಗಿದ್ದು, ಪ್ರತಿಯೊಂದ ಕಥೆಯು ವಿಭಿನ್ನ ಕಥಾಹಂದರವುಳ್ಳದ್ದಾಗಿದೆ. ಡಾ.ಸುಂದರಂ ಅವರು ಪಟ್ಟಾಭಿ ಸೀತರಾಮಯ್ಯ, ರಾಮ ಕೋಟೇಶ್ವರರಾವ್, ಸಿ.ಆರ್‌.ರೆಡ್ಡಿ, ಪಾಲ್ಗುರಿಕೆ ಸೋಮನಾಥ, ಕವಿ ವೇಮನರ ಜೀವನ ಮತ್ತು ಸಾಹಿತ್ಯ ಸಾಧನೆಯನ್ನು ಕಟ್ಟಿಕೊಟ್ಟಿದ್ದಾರೆ. ಅವರು ನವಸಾಕ್ಷರ ಮಾಲೆಗಾಗಿ ರಚಿಸಿದ ಮೋಡ-ಮಿಂಚು, ಗುಡುಗು-ಸಿಡಿಲು, ಮಾಟ-ಮಂತ್ರ-ಮೋಡಿ ಎಷ್ಟು ಸತ್ಯ, ಸೈಕಲ್ ಮತ್ತು ಆಯಿಲ್ ಪುಲ್ಲಿಂಗ್ ಎಂಬ ಕಿರು ಕೃತಿಗಳನ್ನು ರಚಿಸಿದ್ದಾರೆ. 

ಅವರು ಸರಳ, ಸಭ್ಯ ವ್ಯಕ್ತಿತ್ವವುಳ್ಳವರಾಗಿದ್ದು ಮಿತಭಾಷಿ, ಅಜಾತಶತ್ರು ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಯಾವುದೇ ಪ್ರಬಲ ಕೌಟುಂಬಿಕ ಹಿನ್ನೆಲೆ ಇಲ್ಲದೆ ತಮ್ಮ ಪ್ರಾಮಾಣಿಕ ಕೆಲಸಗಳು, ನಿರಂತರ ಅಧ್ಯಯನ, ಸಂಶೋಧನಾ ಬರಹಗಳಿಂದ ಆಂಧ್ರ​‍್ರದೇಶ ಮತ್ತು ಕರ್ನಾಟಕದಲ್ಲಿ ಉತ್ತಮ ಬರಹಗಾರರೆಂಬ ಪ್ರಸಿದ್ದಿಗೆ ಪಾತ್ರರಾಗಿದ್ದು, ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಲಭ್ಯವಾಗಿವೆ. ಅವರಿಗೆ ಆಂಧ್ರ​‍್ರದೇಶ ಸಾಹಿತ್ಯ ಅಕಾಡೆಮಿ, ಪಾಲ್ಕುರಿಕೆ ಸೋಮನಾಥ ಪ್ರಶಸ್ತಿ, ಕೇಂದ್ರಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಅನುವಾದ ಪುರಸ್ಕಾರ, ಭಾಷಾ ಸಮ್ಮಾನ, ಕುವೆಂಪು ಭಾಷಾ ಭಾರತ ನೀಡುವ 2022ನೇ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿದ ಸ್ನೇಹಿತರು, ಶಿಷ್ಯರು ‘ಚಂದನಂ’ ಎಂಬ ಅಭಿನಂದನಾ ಗ್ರಂಥವನ್ನು ತೆಲುಗು ಭಾಷೆಯಲ್ಲಿ, ‘ಸರ್ವಧಾರಿ ಎಂಬ ಕೃತಿಯನ್ನು ಕನ್ನಡ ಭಾಷೆಯಲ್ಲಿ ರಚಿಸಿ ಗೌರವ ಅರ​‍್ಿಸಿದ್ದಾರೆ. ಬಹುಭಾಷಾ ವಿದ್ವಾಂಸ ಸಾಹಿತಿ ಡಾ.ಆರ್‌.ವ್ಹಿ.ಎಸ್ ಸುಂದರಂ ಅವರು ಸಧ್ಯ ಮೈಸೂರಿನ ಕುವೆಂಪುನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.  

- * * * -