ಬಹುಮುಖ ಪ್ರತಿಭೆಯ ಸೃಜನಶೀಲ : ರಾಮಚಂದ್ರ ಎಸ್‌. ಕುಲಕರ್ಣಿ

ಬದುಕು ಎಲ್ಲವನ್ನು ಕಲಿಸುತ್ತ ಹೋಗುತ್ತದೆ. ಬದುಕಿನ ಪಯಣ ಎತ್ತ ಸಾಗುತ್ತದೆ ಎಂಬ ಕಲ್ಪನೆ ಕೂಡ ನಮಗೆ ಸಿಗುವದಿಲ್ಲ. ಹಾಗೆಯೇ ಸಾಹಿತ್ಯದ ಅತೀವ ಆಸಕ್ತಿಯಿಂದಲೇ ಕೈತುಂಬ ಸಂಬಳದ ನೌಕರಿ ತ್ಯಜಿಸಿದ ವಿರಳಾತಿ ವಿರಳರಲ್ಲಿ ರಾಮಚಂದ್ರ ಕುಲಕರ್ಣಿ ಅವರು ಒಬ್ಬರು. ಅವರ ನಿರ್ಧಾರದ ಬಗ್ಗೆ ಅವರಿಗೆ ಈಗಲೂ ತೃಪ್ತಿಯಿದೆ. ಕಾವ್ಯ,  ಸಣ್ಣಕಥೆ, ಲಲಿತ ಪ್ರಬಂಧ, ವೈಚಾರಿಕತೆ, ವ್ಯಂಗ್ಯ, ವಿಡಂಬನೆ, ವ್ಯಕ್ತಿತ್ವ ವಿಕಸನ, ಪ್ರವಾಸ ಕಥನ, ವಿಮರ್ಶೆ, ಅನುವಾದ, ಕನ್ನಡ ಹಾಯಕು ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅವರ ಸೃಜನಶೀಲತೆ ಹರವುಗೊಂಡಿದೆ. 

ರಾಮಚಂದ್ರ ಕುಲಕರ್ಣಿಯವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಡ್ರಾವಿ ಗ್ರಾಮದಲ್ಲಿ 1955ರ ಅಗಸ್ಟ 19ರಂದು ಜನಿಸಿದರು. ತಂದೆ ಶಂಕರರಾವ್, ತಾಯಿ ಸರೋಜ. ಅವರ ಬಾಲ್ಯ ಅತ್ಯಂತ ಕ್ರೂರ ಮತ್ತು ಸಂಕಷ್ಟಮಯವಾಗಿತ್ತು. ಹನ್ನೊಂದನೆಯ ವಯಸ್ಸಿಗೆ ರಾಮಚಂದ್ರರವರು ಹೆತ್ತವರು​‍್ನ ಕಳೆದುಕೊಂಡು ಅನಾಥರಾದರು. ಅವರ ಬೆನ್ನಿಗೆ ಈರ‌್ವರು ಕಿರಿಯ ಸಹೋದರಿಯರು, ಒಬ್ಬ ಸಹೋದರ ಹಾಗೂ ವಯೋವೃದ್ಧೆ ಅಜ್ಜಿ. ಅವರು ಮೇಲ್ಜಾತಿಯವರಾಗಿದ್ದರಿಂದ ಶಾಲಾಶುಲ್ಕ ವಿನಾಯತಿ, ಉಚಿತ ಬೋರ್ಡಿಂಗ್ ಸೌಲಭ್ಯ ಸಿಗದರಿಂದ ವಿದ್ಯಾಭ್ಯಾಸ ಮರೀಚಿಕೆಯಾಯಿತು. ಆದರೂ ಬಾಲಕಾರ್ಮಿಕರಾಗಿದ್ದುಕೊಂಡೇ 1974ರಲ್ಲಿ ಸವದತ್ತಿಯ ಎಸ್‌.ಕೆ.ಸಂಯುಕ್ತ ಪದವಿಪೂರ್ವ ಕಾಲೇಜಿನಿಂದ ಪಿಯುಸಿಯನ್ನು ಉತ್ತಮ ಅಂಕಗಳೊಂದಿಗೆ, ಅತ್ಯುತ್ತಮ ವಿದ್ಯಾರ್ಥಿ ರೋಲಿಂಗ್‌ಶೀಲ್ಡ ಪಡೆದು ತೇರ್ಗಡೆಯಾದರು. 

ಅವರು ಇಡೀ ಕುಟುಂಬ ಉಪವಾಸದಲ್ಲಿರುವದನ್ನು ಮನಗಂಡು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ರಾಮಚಂದ್ರ ಕುಲಕರ್ಣಿಯವರು ಸಣ್ಣಪುಟ್ಟ ನೌಕರಿಗಳನ್ನು ಮಾಡಿಕೊಂಡೇ ಬ್ಯಾಂಕಿನಲ್ಲಿ ಪುಟ್ಟ ನೌಕರಿ ಪಡೆದರು. ನಂತರ ಬಾಹ್ಯ ವಿದ್ಯಾರ್ಥಿಯಾಗಿದ್ದುಕೊಂಡೇ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಉತ್ತಮ ಹುದ್ದೆಯನ್ನು ಗಳಿಸಿದರು. ಅವರು ಕುಟುಂಬದ ಎಲ್ಲ ಜವಾಬ್ದಾರಿ ನಿರ್ವಹಿಸಿ ಒಂದು ಹಂತಕ್ಕೆ ಬಂದಾಗ, ಸಾಹಿತ್ಯದ ಅತೀವ ಆಸಕ್ತಿಯಿಂದ ಹಾಗೂ ಬಾಲ್ಯದಿಂದಲೂ ಬರಹಗಾರನಾಗಬೇಕೆಂಬ ಗುರಿಯನ್ನು ಹೊಂದಿರುವದರಿಂದ ಇನ್ನೂ 16 ವರ್ಷದ ಸೇವಾವಧಿ ಇರುವಾಗಲೇ ಬ್ಯಾಂಕಿನ ನೌಕರಿ ತ್ಯಜಿಸಿ ಹೊರಬಂದು ಲೇಖಕರಾಗಿದ್ದು ವಿಶೇಷ.  

ರಾಮಚಂದ್ರ ಕುಲಕರ್ಣಿಯವರು ಈವರೆಗೂ 30ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. ಅಳಿಲೆಂಬ ನಾನು, ಹೂ-ಮಳೆ, ಮರವಾಗಲಿ ಮರುಜನ್ಮ ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ ಕವನ ಸಂಕಲನಗಳು, ಕಥೆಗಳಲ್ಲದ ಕಥೆಗಳು, ಪುಟಕ್ಕಿಷ್ಟು ಕಥೆಗಳು, ತುಂತುರು ಕಥೆಗಳು, ಸಕ್ಕರೆ ಬೊಂಬೆ ಹಾಗೂ ಇತರ ಕಥೆಗಳು, ಕಿರಿ-ಕಿರಿ ವ್ಯಂಗ್ಯ ಕಥೆಗಳು, ಮಿನಿಕಥಾ ಮಿನುಗು-ಮಿಂಚು ಕಥಾ ಸಂಕಲನಗಳು, ಹಾಯ್! ಹಾಯ್‌ಕು, ಹಾಯ್!ಹಾಯ್‌ಕು ಭಾಗ-2, ಹಾಯ್! ಹಾಯ್‌ಕು ಭಾಗ-3, ಹಾಯ್!ಹಾಯ್‌ಕು ಭಾಗ-4, ನಕ್ಷತ್ರ ಬೆಳಕು, ತಿಂಗಳ ಬೆಳಕು ಲಲಿತ ಪ್ರಬಂಧಗಳು, ಸಾವೇ ನೀ ಸಾಯುವಿ, ಇಂಗ್ಲೀಷನಿಂದ ಅನುವಾದ, ವಿಚಾರ-ವಿಮರ್ಶೆ, ಶಾಯರಿ ಸಿಂಚನ, ಅನಿಸಿದ್ದು ಕನಸಿದ್ದು, ಮನಸೆಳೆದ ಓದು, ನೆನೆದ ನೆನಹುಗಳು ನೆನೆದ ಗೊಂದಲಪುರದ ಅಂದಣದಿಂದ, ಬೂದಿ ಹರಡಿದ ಬೂದಿಯಿಂದ, ಚಿತ್ತಚ್ಯವನ, ಅನುಭೂತ ಅನವರತ, ನಾನು ಎಂಬ ನೆರಳು ಕನ್ನಡಿ ಹಾಗೂ ಒಗಟು ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರು ಕೃತಿಗಳನ್ನು ಹೊರತಂದಿದ್ದಾರೆ.  

ಕುಲಕರ್ಣಿಯವರ ಕವಿತೆಗಳಲ್ಲಿ ನವೋದಯ, ನವ್ಯ ಸಂವೇದನೆಗಳು ಹತ್ತಿರವಾಗಿ ಸಂಗತಿಗೊಂಡಿವೆ. ಸರಳ ಮಾನವತಾವಾದ ಇವುಗಳ ಮೂಲದಲ್ಲಿ ಹಾಸಿಕೊಂಡಿದ್ದು ಒಂದು ವಿಶೇಷ ಲಕ್ಷಣ. ಮಹಿಳೆ ಮತ್ತು ಪ್ರಕೃತಿಯನ್ನು ಸಮಚಿತ್ತಭಾವದಿಂದ ಬದುಕಿನ ಮೌಲ್ಯಗಳಾಗಿ ಹೊರಹೊಮ್ಮಿಸುವ ಅವರ ಕವನಗಳ ದೊಡ್ಡಗುಣ. ಹಾಯಕು ನೋಡಲು ಸುಲಭ. ಆದರೆ ಬರೆಯುವದು ಕಷ್ಟ ಜಪಾನಿ ಹಾಯ್ಕುಗಳನ್ನು ಓದಿದರೆ ಸಿಗುವ ವಿಶಿಷ್ಟ ಘಮ, ಸವಿ ಅವರ ಕನ್ನಡ ಹಾಯಕುಗಳಲ್ಲಿದ್ದುದು ವಿಶೇಷ. ಕಥಾವಸ್ತು ಎಂಥದ್ಧೇ ಇರಲಿ, ಅದನ್ನು ನಿರ್ವಹಿಸುವ ಕಲೆಯನ್ನು ಅವರ ಕಥೆಗಳಲ್ಲಿ ಕಾಣಬಹುದು. ನವಿರು ನಿರೂಪಣೆ, ಜಾತಿ-ವರ್ಗ ಶೋಷಣೆಯ ಹಲವು ಮುಖಗಳು, ಮಜಲುಗಳು, ಸಂಬಂಧಗಳು ಅವರ ಕಥೆಗಳಲ್ಲಿ ಶಕ್ತಿಯುತವಾಗಿ ತೆರೆದುಕೊಳ್ಳುತ್ತವೆ. ವಿಚಾರ-ವಿಮರ್ಶೆ ಒಂದು ವಿಭಿನ್ನ ಕೃತಿ, ವೈಚಾರಿಕತೆ, ಚಿಂತನೆ, ಗ್ರಂಥ ಸಮೀಕ್ಷೆ, ವಿಮರ್ಶೆಗಳೆಲ್ಲವೂ, ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ವಿದ್ಯಾರ್ಥಿಗಳು, ಸಾಹಿತ್ಯಸಕ್ತರು, ಚಿಂತನಾಶೀಲರು ಓದಿ ಪರಿಭಾವಿಸಬೇಕಾದ ಕೃತಿಯಿದು. ನಕ್ಷತ್ರ ಬೆಳೆಕು ಕೃತಿ ಲಲಿತ ಪ್ರಬಂಧಗಳ ಸಂಕಲನ, ನವಿರಾದ ಹಾಸ್ಯದಿಂದ ಒಡಗೂಡಿ ವಸ್ತುಗಳು, ಮಹತ್ತರ ವಿಚಾರಗಳು, ಸಾಮಾನ್ಯ ವಿಷಯಗಳು ಈ ಕೃತಿಯಲ್ಲಿ ವಿಶಿಷ್ಟ ಶೈಲಿಯಲ್ಲಿ ಮೂಡಿಬಂದಿವೆ. 

ಕವಿ, ಕಥೆಗಾರ ರಾಮಚಂದ್ರ ಕುಲಕರ್ಣಿಯವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ನಾಡಿನ ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ. ಯಾದಗಿರಿ ಪ್ರತಿಭಾ ಪುರಸ್ಕಾರ ವೇದಿಕೆಯಿಂದ ಕಥೆಗಳಲ್ಲದ ಕಥೆಗಳು ಸಂಕಲನಕ್ಕೆ ಅಪ್ಪ ಪಶಸ್ತಿ, ಮುಂಬೈನ ಮುಂಬೆಳಕು ಕಥಾ ಸ್ಪರ್ಧೆಯಲ್ಲಿ ಕಾಕಾ ಕಥೆಗೆ ದ್ವಿತೀಯ ಬಹುಮಾನ, ಮುಂಬೈನ ಗೋಕುಲವಾಣಿ ಯುಗಾದಿ ಕಥಾ ಸ್ಪರ್ಧೆಯಲ್ಲಿ ಸಕ್ಕರೆ ಬೊಂಬೆ ಕಥೆಗೆ ಪ್ರಥಮ ಬಹುಮಾನ, ಕುಮಟಾ ಹಣತೆ ಕಥಾಸ್ಪರ್ಧೆಯಲ್ಲಿ ನೀಲ್ ಆಮ್ ಸ್ಟ್ರಾಂಗ್ ಕಥೆಗೆ ತೃತೀಯ ಬಹುಮಾನ, ಮಂಡ್ಯ ಕರ್ನಾಟಕ ಸಂಘದಿಂದ ಬಯಲು ಆಲಯದೊಳಗೋ ಕಥೆಗೆ ಪ್ರಥಮ ಬಹುಮಾನ, ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಮರವಾಗಲಿ ಮರುಜನ್ಮ ಕವಿತೆಗೆ ಬಹುಮಾನ, ಬಸವ ಜ್ಯೋತಿ ಪ್ರಶಸ್ತಿ, ನರಗುಂದದ ಬೆಳುವಲನಾಡು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘದಿಂದ ಸಾಹಿತ್ಯ ಪ್ರಶಸ್ತಿ, ಕೆ.ಆರ್‌.ನಗರ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ರತ್ನಾಕರವರ್ಣಿ ದತ್ತಿ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಲು ಅವರನ್ನರಿಸಿಕೊಂಡು ಬಂದಿವೆ. 

ಸಾಹಿತಿ ರಾಮಚಂದ್ರ ಕುಲಕರ್ಣಿಯವರು 1993ರ ಡಿಸೆಂಬರ 7ರಂದು ಹುಬ್ಬಳ್ಳಿಯ ಶ್ರೇಯಶ್ವಿನಿ ಅವರನ್ನು ಮದುವೆಯಾದರು. ಅವರಿಗೆ ಒಬ್ಬಳೆ ಮಗಳು ಚೈತ್ರಾ. ಚೈತ್ರಾರವರು ಸ್ವಾಪ್ಟವೇರ್ ಇಂಜನೀಯರ್ ಸೀರೀಶ್ ಅವರನ್ನು ಮದುವೆಯಾಗಿ ಜಪಾನದ ಟೋಕಿಯೋದಲ್ಲಿ ನೆಲೆಸಿದ್ದಾರೆ. ರಾಮಚಂದ್ರ ಕುಲಕರ್ಣಿಯವರು ಕಳೆದ 18 ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿದ್ದು, ಸಧ್ಯದಲ್ಲಿಯೇ ಅವರು ಜಪಾನಿಗೆ ಪ್ರಯಾಣ ಬೆಳೆಸಲಿದ್ದಾರೆ. ಸರಳ ವ್ಯಕ್ತಿತ್ವದ ರಾಮಚಂದ್ರರವರು ‘ನೌಕರಿ ತ್ಯಜಿಸಿ, ಮತ್ತೇ ಬಡತನ ಆವಾಹಿಸಿಕೊಂಡದ್ದರಿಂದಲೇ ನಾನು ಸಾಹಿತ್ಯದ ಮೇಲೆ ಕೇಂದ್ರಕರಿಸಲು ಸಾದವಾದದ್ದರ ಬಗ್ಗೆ ಹೆಮ್ಮೆ ಇದೆ’ ಎಂದು ಅವರು ಹೇಳುತ್ತಾರೆ. ಅವರು ಬ್ಯಾಂಕಿನಲ್ಲಿದ್ದಾಗಲೇ ಸಾಕಷ್ಟು ಪತ್ರಿಕೆಗಳಿಗೆ ಬರೆದಿದ್ದರು. ಲಂಕೇಶ ಪತ್ರಿಕೆ, ಹೊಸತು, ಪ್ರಜಾವಾಣಿ, ಸಂಕ್ರಮಣ, ಕನ್ನಡ ಪ್ರಭ, ಸಂಚಯ, ಕಸ್ತೂರಿ, ಭಾವನಾ, ಮಯೂರ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಅವರನ್ನು ಕಥೆ, ಕವಿತೆ, ಲಲಿತಪ್ರಬಂಧಗಳಿಗೆ ಬಹುಮಾನಗಳನ್ನು ಕೂಡ ಸ್ವೀಕರಿಸಿದ್ದರು. ಆಶ್ಚರ್ಯವೆಂದರೇ ಬರೆಯುವ ಗೀಳೇ ಅವರನ್ನು ಬ್ಯಾಂಕಿನ ನೌಕರಿಯನ್ನು ತ್ಯಜಿಸುವಂತೆ ಮಾಡಿದ್ದು ! 

ರಾಮಚಂದ್ರ ಕುಲಕರ್ಣಿಯವರದ್ದು ವಿಭಿನ್ನ ಶೈಲಿ ಅವರ ಯಾವದೇ ಬರಹದಲ್ಲೂ ಅವರ ಛಾಪನ್ನು ಕ್ಷಣಮಾತ್ರದಲ್ಲಿ ಗುರುತಿಸಬಹುದು. ಅವರ ಶೈಲಿಗೆ ಅವರೇ ಸಾಟಿ ! ಅವರ ಪ್ರತಿ ಹಾಯ್ಕಗಳೂ ಗಮನ ಸೆಳೆಯುವದರೊಂದಿಗೆ ಅಂತರಂಗದ ಕಣ್ಣು ತೆರೆಸುತ್ತವೆ. ಆಲೋಚನೆಯನ್ನು ಉದ್ಧೀಪನಗೊಳಿಸಿ ವಿಚಾರ ಪ್ರಚೋದಕ ಶಕ್ತಿಗೆ ಹೊಳಪು ನೀಡುತ್ತವೆ. ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಬಹುಮುಖವಾಗಿದ್ದು, ವಿಭಿನ್ನ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಉತ್ತಮ ಕಥೆಗಾರರೆನಿಸಿಕೊಂಡಿರುವ ಕುಲಕರ್ಣಿ ಅವರದು ಶಾಂತ ಸ್ವಭಾವದ ವ್ಯಕ್ತಿತ್ವ. ಅವರ ಸಾಹಿತ್ಯದ ಸಾಧನೆಗೆ ಅವರಲ್ಲಿರುವ ಸರಳ ಸಜ್ಜನಿಕೆಯ ಸ್ವಭಾವ, ನಿರಂತರ ಅಧ್ಯಯನಶೀಲತೆ, ಸದಾ ಚಟುವಟಿಕೆಯಿಂದಿರುವ ವ್ಯಕ್ತಿತ್ವವೇ ಕಾರಣವಾಗಿದೆ. ಸಂಪರ್ಕಿಸಿರಿ: 9380536358. 

- * * * -