ಮಾಸ್ಕೋ, ನವೆಂಬರ್ 12 : ತಮಗೆ ರಾಜಕೀಯ ಆಶ್ರಯ ನೀಡಿರುವ ಮೆಕ್ಸಿಕೋಗೆ ತೆರಳುವುದಾಗಿ ಬೊಲಿವಿಯಾದ ಮಾಜಿ ಅಧ್ಯಕ್ಷ ಇವೊ ಮೊರೇಲ್ಸ್ ಘೋಷಿಸಿದ್ದು, ಶೀಘ್ರದಲ್ಲೇ ಸ್ವದೇಶಕ್ಕೆ ವಾಪಸ್ಸಾಗುವುದಾಗಿ ಹೇಳಿದ್ದಾರೆ. 'ಸಹೋದರ ಮತ್ತು ಸಹೋದರಿಯರೇ ನಾನು ಮೆಕ್ಸಿಕೋಗೆ ಹೊರಡುತ್ತೇನೆ' ಎಂದು ಮೊರೇಲ್ಸ್ ಸೋಮವಾರ ಸಂಜೆ ಸ್ಥಳೀಯ ಕಾಲಮಾನ ಬೆಳಿಗ್ಗೆ 9.30 ಕ್ಕೆ ಟ್ವಿಟರ್ನಲ್ಲಿ ಬರೆದಿದ್ದಾರೆ. 'ರಾಜಕೀಯ ಕಾರಣಗಳಿಗಾಗಿ ದೇಶವನ್ನು ತೊರೆಯುವುದು ನೋವುಂಟು ಮಾಡುತ್ತದೆ. ಆದರೆ, ಶೀಘ್ರದಲ್ಲೇ ನಾನು ಹೆಚ್ಚಿನ ಬಲ ಮತ್ತು ಶಕ್ತಿಯೊಂದಿಗೆ ಹಿಂದಿರುಗುತ್ತೇನೆ' ಎಂದು ಅವರು ಹೇಳಿದ್ದಾರೆ. ಮೊರೇಲ್ಸ್ ಅವರನ್ನು ಕರೆತರಲು ಮೆಕ್ಸಿಕೋ ಸರ್ಕಾರ ಕಳುಹಿಸಿದ ವಿಮಾನ ಸ್ಥಳೀಯ ಕಾಲಮಾನ 6.30ಕ್ಕೆ ಬೊಲಿವಿಯಾಕ್ಕೆ ತೆರಳಿತು. ಮಾರ್ಗದ ಮಧ್ಯೆ, ಪೆರುವಿನಲ್ಲಿ ಇಂಧನ ತುಂಬಿಸಿಕೊಂಡಿದೆ ಎಂದು ಪೆರು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ಅಕ್ಟೋಬರ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದ ಮೊರೇಲ್ಸ್, ಸಶಸ್ತ್ರ ಪಡೆಗಳು ಮತ್ತು ಪೊಲೀಸರ ಬೆಂಬಲದಿಂದ ನಡೆದ ಬೃಹತ್ ಪ್ರತಿಭಟನೆಗಳ ನಡುವೆ ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ದೇಶ ಮೊರೇಲ್ಸ್ಗೆ ರಾಜಕೀಯ ಆಶ್ರಯ ನೀಡುತ್ತಿದೆ ಎಂದು ಮೆಕ್ಸಿಕೋ ವಿದೇಶಾಂಗ ಸಚಿವ ಮಾರ್ಸ್ಲೊ ಎಬ್ರಾರ್ಡ್ ಸೋಮವಾರ ಘೋಷಿಸಿದರು.