ವಿವಿಧ ಬಣ್ಣ ಬಣ್ಣಗಳಿಂದ ಶೃಂಗಾರಗೊಂಡ ಹಣತೆಗಳು, ಆಕಾಶಬುಟ್ಟಿಗಳು

ಲೋಕದರ್ಶನ ವರದಿ

ಮೋಳೆ:  ದ್ವಾಪರ ಯುಗದಲ್ಲಿ ಶ್ರೀರಾಮ ವನವಾಸಕ್ಕೆ ತೆರಳುವಾಗ ನಾಡಿನಲ್ಲಿ ಕತ್ತಲೆ ಕವಿದಿತ್ತು, ಶ್ರೀ ರಾಮ ಕಾಡಿನಿಂದ ನಾಡಿಗೆ ಹಿಂತಿರುಗಿದಾಗಲೇ ನಾಡಿನಲ್ಲಿ ಬೆಳಕಿನ ಕಿರಣ ಮೂಡಿತು, ಅಂತೆಯೇ ಪ್ರವಾಹ ಹಾನಿಯಿಂದ ಜನತೆಯ ಮನಸ್ಸಿನಲ್ಲಿ ತುಂಬಿರುವ ಕತ್ತಲು ದೂರ ಮಾಡಿ ಎಲ್ಲರ ಬಾಳು ಬೆಳಗಲು ದೀಪಾವಳಿ ಹಬ್ಬ ಪ್ರಾರಂಭಗೊಂಡಿದೆ.

ಹಿಂದೂಗಳ ಬಹುದೊಡ್ಡ ಹಬ್ಬ ದೀಪಾವಳಿ, ಈ ಹಿನ್ನೆಲೆಯಲ್ಲಿ ವಿವಿಧ ಬಣ್ಣ ಬಣ್ಣಗಳಿಂದ ಶೃಂಗಾರಗೊಂಡ ಹಣತೆಗಳು, ಆಕಾಶಬುಟ್ಟಿಗಳು, ಇಲೇಕ್ಟ್ರಾನಿಕ್ ವಸ್ತುಗಳು ಬಣ್ಣ, ಬಣ್ಣದ ಮೇಣದಬತ್ತಿಗಳು ಶೃಂಗಾರಗೊಂಡು ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. 

ತನ್ನ ಬುಡದಲ್ಲಿ ಕತ್ತಲೆಯನ್ನಿಟ್ಟುಕೊಂಡು ಸುತ್ತಲು ಬೆಳಕು ಚೆಲ್ಲುವ ಹಣತೆ ದೀಪಾವಳಿ ಹಬ್ಬದ ಸಡಗರಕ್ಕೆ ಜನರಲ್ಲಿ ಆಥರ್ಿಕವಾಗಿ ಎಷ್ಟೇ ತೊಂದರೆ ಇದ್ದರು, ತಮ್ಮ ಶಕ್ತಿಗನುಗುಣವಾಗಿ ಚಿಕ್ಕದಾದ ದೀಪವನ್ನಾದರೂ ಮನೆಯ ಬಾಗಿಲ ಬಳಿ ಹಚ್ಚಿಟ್ಟು ಮನೆಯ ಸಂತೋಷ, ಸಮೃದ್ಧಿ, ಸೌಖ್ಯವನ್ನು ಹೆಚ್ಚಿಸಲು ಅಂಧಃಕಾರದಿಂದ ಬೆಳಕಿನೆಡೆಗೆ ಬಾಳು ಸಾಗಲಿ ಎಂಬ ಪವಿತ್ರವಾದ ಸಾಂಪ್ರದಾಯಿಕ ಭಾವನೆ ಬಿತ್ತುವ ಹಬ್ಬ ಮತ್ತೇ ಬಂದಿದೆ. 

ಗ್ರಾಮೀಣ ಸೊಗಡನ್ನು ಪರಿಚಯಿಸುವ ಸಾಧಾರಣ ಜೆಡಿ ಮಣ್ಣಿನಿಂದ ಹಣತೆ ತಯ್ಯಾರಿಸುವುದು, ಅತ್ಯಂತ ಸುಲಭ ದರದಲ್ಲಿ ದೊರೆಯುತ್ತವೆ. ಮಣ್ಣಿನ ದೀಪ, ತೂಗು ದೀಪ, ನಾಲ್ಕಡಿಯ ಕಂಬ ದೀಪ, ಕಾಮಾಕ್ಷಿಯ ದೀಪ, ತೇಲುವ ದೀಪ, ಆನೆ ದೀಪ, ಮ್ಯಾಜಿಕ್ ದೀಪ ಹೀಗೆ ಹಲವಾರು ಶೈಲಿಯ ದೀಪಗಳನ್ನು ವ್ಯಾಪಾರಸ್ಥರು ಮಾರಾಟಕ್ಕಿಟ್ಟಿದ್ದಾರೆ. 

ಎಲ್ಲರ ಮನೆ, ಮನ ಬೆಳಗಿ ತನುಮನ ಸೆಳೆಯುವ ಈ ರಂಗು ರಂಗಿನ ಆಕಾಶ ಬುಟ್ಟಿ ಹಾಗೂ ಅಣತೆಗಳು ಬೆಲೆ ತುಸು ದುಬಾರಿ ಎನಿಸಿದರು, ಪ್ರತಿಯೊಬ್ಬರು ಖರೀದಿಸಲೇ ಬೇಕಾಗುತ್ತದೆ ಎಂಬುದು ಗ್ರಾಹಕ ವಿಜಯಲಕ್ಷ್ಮೀ ಅವರ ಅಭಿಪ್ರಾಯ, ಮನೆ ಬೆಳಗುವ ದೀಪಕ್ಕೆ ಎಷ್ಟೇ ಹಣವಾದರೂ ಖರೀದಿಸಿ, ಶೃದ್ಧಾ ಭಕ್ತಿಯಿಂದ ದೀಪಾವಳಿಯನ್ನು ಆಚರಿಸಿದರೆ, ನಮ್ಮ ಜೀವನ ಪಾವನವಾಗುತ್ತದೆ ಎಂಬುದು ಶಿಲ್ಪಾ ಎಂಬ ಮಹಿಳೆಯ ನಂಬಿಕೆ. 

ಮಕ್ಕಳೇ ಎಚ್ಚರ : ದೀಪಾವಳಿ ಬಂತೆಂದರೆ, ಮಕ್ಕಳಿಗೆ ಪಟಾಕಿ ಸಿಡಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ ಆದರೆ ಪಟಾಕಿ ಸಿಡಿಸುವಾಗ ಸ್ವಲ್ಪ ಮೈ ಮರೆತರೂ ದೃಷ್ಟಿ ಕಳೆದುಕೊಳ್ಳುವ ಅಪಾಯ ತಪ್ಪಿದ್ದಲ್ಲ. 

ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಹೋದ 10 ರಿಂದ 16 ವರ್ಷ ವಯಸ್ಸಿನ ಸಾಕಷ್ಟು ಮಕ್ಕಳು ದೃಷ್ಟಿ ಕಳೆದುಕೊಂಡಿರುವಂತಹ ಅನೇಕ ಪ್ರಕರಣಗಳಿವೆ. ಗಂಧಕ, ರಂಜಕ, ನೈಟ್ರೋಜನ್ನಂತಹ ಅಪಾಯಕಾರಿ ಲೋಹಗಳಿಂದ ಪಟಾಕಿಗಳನ್ನು ತಯ್ಯಾರಿಸಿರುತ್ತಾರೆ. ಹೀಗಾಗಿ ಮಕ್ಕಳು ಪಟಾಕಿಯಿಂದ ಆದಷ್ಟು ದೂರವಿರುವುದೇ ಒಳ್ಳೆಯದು. 

ಪಟಾಕಿ ಸಿಡಿಸುವದರಿಂದ ಬರಿ ಅಂಧತ್ವ ಮಾತ್ರವಲ್ಲದೆ, ಅದರಲ್ಲಿರುವ ಕ್ಯಾಡ್ಮಿಯಂ ಸತು, ತಾಮ್ರ, ಮ್ಯಾಗ್ನೆಸಿಯಂ ಮುಂತಾದ ವಿಷಕಾರಿ ಲೋಹದಿಂದ ಇತರರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಷಕಾರಿ ಲೋಹ ಹಾಗೂ ಅನೀಲಗಳಿಂದ ಕಣ್ಣು, ಮೂಗಿನ ತೊಂದರೆ, ಅಸ್ತಮಾ ಸೇರಿದಂತೆ ಉಸಿರಾಟದ ತೊಂದರೆಗಳು ಉಂಟಾಗುತ್ತದೆ ಎಂಬುವುದು ಹಿರಿಯ ವೈದ್ಯರ ಅಭಿಪ್ರಾಯ. ಅದಕ್ಕೆ ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಮುನ್ನೇಚರಿಕೆ ವಹಿಸಬೇಕೆಂಬುದು ಅಭಿಪ್ರಾಯ.