ಚಿತ್ರದುರ್ಗ, ಅ
31: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಚಹಾ ಮಾರುತ್ತಿದ್ದರು ಎಂಬ ಹೇಳಿಕೆಗಳಿಗೆ ತೀಕ್ಷ್ಣವಾಗಿ
ಪ್ರತಿಕ್ರಿಯಿಸಿರುವ ಗುಜರಾತ್ ಶಾಸಕ ಹಾಗೂ ದಲಿತ ಮುಖಂಡ ಜಿಗ್ನೇಶ್ ಮೆವಾನಿ, ಮೋದಿ ಚಹಾ ಮಾರುತ್ತಿದ್ದರು
ಎಂಬುದು ‘ಚೈಲ್ಡಿಶ್ ಹೇಳಿಕೆ’. ಇದು ಈ ಶತಮಾನದ ಹಾಸ್ಯ ಎಂದು ಟೀಕಿಸಿದ್ದಾರೆ.
ಕಾರ್ಯಕ್ರಮವೊಂದಲ್ಲಿ ಮೋದಿ ವಿರುದ್ಧ ಕುರ್ಚಿ ಎಸೆಯುತ್ತೇನೆ ಎಂಬ ನೀಡಿದ ಹೇಳಿಕೆ ಸಂಬಂಧ ಚಿತ್ರದುರ್ಗ ನ್ಯಾಯಾಲಯದಲ್ಲಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾದ ಮೇವಾನಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಮೋದಿ ಅವರು ಹಿಂದೆ ಚಹಾ ಮಾರುತ್ತಿದ್ದರು ಎಂಬುದು ಕೇವಲ ಹಾಸ್ಯವಷ್ಟೇ. ಅವರು ಚಹಾ ಮಾರುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ಈಗ ಮಾತ್ರ ದೇಶವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಟಿಪ್ಪು ಜಯಂತಿ ಮತ್ತು ಪಠ್ಯಪುಸ್ತಕದಿಂದ ಹೊರತೆಗೆಯುವ ವಿಚಾರವಾಗಿ ಟಿಪ್ಪು ಸುಲ್ತಾನ್ ಹೆಸರನ್ನು ಇಲ್ಲವಾಗಿಸಲು ಯತ್ನಿಸಲಾಗುತ್ತಿದೆ. ಇದು ಆರೆಸ್ಸೆಸ್ ಹಾಗೂ ಬಿಜೆಪಿಯ ಗುಪ್ತ ಅಜೆಂಡಾ ಎಂದು ಜಿಗ್ನೇಶ್ ಮೇವಾನಿ ಆರೋಪಿಸಿದರು.
ಬಿಜೆಪಿ ಸಮಾಜದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳನ್ನು ವಿಭಜಿಸಿ, ಮುಸ್ಲಿಂ ಸಮುದಾಯವನ್ನು ದಮನ ಮಾಡಲು ಯತ್ನಿಸುತ್ತಿದೆ. ವೈವಿಧ್ಯತೆ ಮತ್ತು ಏಕತೆಯಿಂದಿರುವುದೇ ನಮ್ಮ ಭಾರತ ದೇಶದ ಸೌಂದರ್ಯ. ಅದನ್ನು ಪಾಲಿಸದಿದಲ್ಲಿ ಪ್ರಜಾಪ್ರಭುತ್ವ ಉಳಿಯದು ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ತಾಂಡವ ಆಡುತ್ತಿದೆ, ಇದಕ್ಕೆ ಪ್ರಧಾನ ಮಂತ್ರಿ ಮೋದಿ ಬಳಿ ಯಾವುದೇ ಉತ್ತರವಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಇಂಥ ತಂತ್ರಗಳನ್ನು ಹೂಡುತ್ತಿದ್ದಾರೆ. ದೇಶದಲ್ಲಿ ಮನ್ರೇಗಾ ಯೋಜನೆ, ಆರೋಗ್ಯ ಯೋಜನೆಗಳು ಮುಗ್ಗರಿಸಿವೆ. ಅದರ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ ಎಂದರು.
ವೀರ್ ಸಾವರ್ ಕರ್ ಬ್ರಿಟೀಷರಿಗೆ 13 ಬಾರಿ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ. ಅವರಿಗೆ ಬಿಜೆಪಿ ಭಾರತ ರತ್ನ ಪ್ರಶಸ್ತಿ ನೀಡಲು ಮುಂದಾಗಿದೆ. ಜನರಿಗೆ ಈಗ ಬಿಜೆಪಿ ಸರ್ಕಾರದ ಧೋರಣೆ ಅರಿವಾಗುತ್ತಿದೆ. ಎಲ್ಲಾ ಪಕ್ಷದ ನಾಯಕರು ವಾಸ್ತವ ಪರಿಸ್ಥಿತಿ ಜನರ ಮುಂದಿಡಬೇಕಿದೆ ಎಂದರು.
ಮೋದಿ ಯಾರೆಂದು ಗೊತ್ತಿಲ್ಲ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮೆವಾನಿ, ನಾನು ಏನು ತಪ್ಪು ಮಾಡಿಲ್ಲ. ಅಸಲಿಗೆ ನನಗೆ ಮೋದಿ ಯಾರು ಎಂದೇ ಗೊತ್ತಿಲ್ಲ ಎಂದು ಮೆವಾನಿ ವ್ಯಂಗ್ಯವಾಡಿದರು.