ನವದೆಹಲಿ/ಬೆಂಗಳೂರು, ಮಾ 24 , ದೇಶದ ಅಪ್ರತಿಮ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್‌ಗುರು ಅವರು
ಹುತಾತ್ಮರಾದ ದಿನ. ದೇಶ ಈ ವೀರ ಹೋರಾಟಗಾರರನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಮೂವರು ಹುತಾತ್ಮರ ತ್ಯಾಗ ಬಲಿದಾನಗಳನ್ನು ಭಾರತ ಸದಾ ಸ್ಮರಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಂದು ದೇಶದ ಹಿರಿಯ ಸಮಾಜ ಸುಧಾರಕ ನಾಯಕರಾಗಿದ್ದ ರಾಮ್‌ಮನೋಹರ್ ಲೋಹಿಯಾ ಅವರ ಪುಣ್ಯ ತಿಥಿಯನ್ನು ಸಹ ಆಚರಿಸಲಾಗುತ್ತಿದೆ. ಡಾ.ಲೋಹಿಯಾ ಅವರ ಸಿದ್ದಾಂತಗಳು ಮತ್ತು ಸುಧಾರಣಾ ಕಾರ್ಯಗಳು ಜನತೆಗೆ ಸರ್ವಕಾಲಕ್ಕೂ ಸ್ಫೂರ್ತಿದಾಯಕವೆಂದುಪ್ರಧಾನಮಂತ್ರಿ ಮೋದಿ ಬಣ್ಣಿಸಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರು ಅವರ ಹುತಾತ್ಮ ದಿನದ ಅಂಗವಾಗಿ ಗೌರವ ನಮನ ಸಲ್ಲಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, ಭಗತ್ ಸಿಂಗ್ ಅವರು, ಸುಖ್ ದೇವ್, ರಾಜ್ ಗುರು ಅವರೊಟ್ಟಿಗೆ ದೇಶದ ದಾಸ್ಯ ಮುಕ್ತಿಗಾಗಿ ನೇಣಿಗೆ ಕೊರಳೊಡ್ಡಿ ಹುತಾತ್ಮರಾದ ದಿನವಿದು. ಸ್ವಾತಂತ್ರ್ಯದೆಡೆಗಿನ ಅವರ ತುಡಿತ, ದೇಶಪ್ರೇಮ, ತ್ಯಾಗಗಳಿಗೆ ಕೋಟಿ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೊಳ ಟ್ವೀಟ್ ಮಾಡಿ, ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ಕಿರಿಯ ವಯಸ್ಸಿನಲ್ಲೇ ಪ್ರಾಣಾರ್ಪಣೆ ಮಾಡಿದ ಈ ಮಹಾನ್ ದೇಶಭಕ್ತರನ್ನು ನಾವೆಲ್ಲರೂ ಸ್ಮರಿಸೋಣ ಎಂದು ತಿಳಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ, ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಈ ದಿನ ಹುತಾತ್ಮರ ದಿನವಾಗಿ ಆಚರಣೆ ಮಾಡಲಾಗುತ್ತದೆ. ಅವರ ತ್ಯಾಗ ಬಲಿದಾನವನ್ನು ಗೌರವಪೂರ್ವಕವಾಗಿ ನೆನೆಯುತ್ತೇವೆ ಎಂದು ತಿಳಿಸಿದೆ.