ಬೆಂಗಳೂರು,ಫೆ 6 : ಹಲವು ಬುಡಕಟ್ಟು ಜನಾಂಗದ ನಾಯಕರು ದೇಶಕ್ಕೆ ಮಾದರಿಯಾಗಿದ್ದಾರೆ. ರಾಜಕೀಯ, ಶಿಕ್ಷಣ, ಕ್ರೀಡೆ ಮೊದಲಾದ ಕ್ಷೇತ್ರದಲ್ಲಿ ಹಲವರು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ್ದು, ಅವರನ್ನು ಮಾದರಿಯನ್ನಾಗಿಟ್ಟುಕೊಂಡು ಜೀವನದಲ್ಲಿ ಗುರಿ ತಲುಪಿ ಎಂದು ನೆಹರು ಯುವ ಕೇಂದ್ರದ ರಾಷ್ಟ್ರೀಯ ಉಪಾಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ ಹೇಳಿದ್ದಾರೆ.
ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯುತ್ತಿರುವ 12ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಬಾಕ್ಸರ್ ಮೇರಿಕೋಮ್, ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮೊದಲಾದವರು ದೇಶದ ಹಿಂದುಳಿದ ಸ್ಥಳಗಳಿಂದ ಬಂದವರು. ಅವರು ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಆದರೆ ಇಂದು ವಿಶ್ವ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಇಂಥ ಸಾಧನೆ ಮಾಡಲು ನಿಮಗೂ ಅವಕಾಶವಿದೆ ಎಂದರು.
ಎಲ್ಲದಕ್ಕೂ ಮೊದಲು ವಿದ್ಯಾಭ್ಯಾಸ ಮುಗಿಸಿ. ಗುಣಮಟ್ಟದ ಶಿಕ್ಷಣದಿಂದ ಜ್ಞಾನ ದೊರೆಯಲಿದ್ದು, ಜೀವನದ ಗುರಿ ತಲುಪಲು ಸಹಕಾರಿಯಾಗುತ್ತದೆ. ಜೊತೆಯಲ್ಲಿ ಕ್ರೀಡೆ, ಮತ್ತಿತರ ಕ್ಷೇತ್ರದಲ್ಲಿ ತೊಡಗಿಕೊಳ್ಳಬಹುದಾಗಿದೆ. ಮುಂದೆ ದೇಶದ ಗೌರವವನ್ನು ವೃದ್ಧಿಸುವ ಕೆಲಸ ಮಾಡಬಹುದು ಎಂದರು.
ಕರ್ನಾಟಕವು ಸಾಂಸ್ಕೃತಿಕವಾಗಿ ಮಾದರಿ ರಾಜ್ಯ ಇಲ್ಲಿನ ಬುಡಕಟ್ಟು ಜನಾಂಗದ ವಿಶೇಷತೆ ಅರಿಯಲು ಇಲ್ಲಿ ಆಯೋಜನೆಯಾಗಿರುವ 6 ದಿನದ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ ಸಹಕಾರಿಯಾಗಿದೆ. ಇಲ್ಲಿನ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆ ಅರಿತುಕೊಳ್ಳಿ. ವಿದ್ಯಾರ್ಥಿಗಳೊಂದಿಗೆ ಬೆರೆತು ಹೊಸತ ಕಲಿತುಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕಿ ಸಾಧನಾ ಸಿಂಗ್ ಮಾತನಾಡಿ, ದೇಶದ 20 ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 31 ಆದಿವಾಸಿ ಸಮುದಾಯದ 4 ಸಾವಿರಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಬುಡಕಟ್ಟು ಯುವಕರಿಗೆ ದೇಶದ ವೈವಿಧ್ಯಮಯ ಸಂಸ್ಕೃತಿ ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ಪರಂಪರೆ, ಜೀನವ ಶೈಲಿ, ಸಂಸ್ಕೃತಿ, ವಿಕಾಸವಾದ, ಶಿಕ್ಷಣ, ಕಲೆ, ರೋಜಗಾರ್ ಮೊದಲಾದ ವಿಚಾರ ಅರಿಯಲು ಸಹಕಾರಿ. ಆದಿವಾಸಿ ಮಕ್ಕಳಿಗೆ ತಮ್ಮ ಸಮುದಾಯದ ಇತಿಹಾಸ, ಪರಂಪರೆಯನ್ನು ದೇಶದೆಲ್ಲೆಡೆ ಪಸರಿಸಲು, ಮುಂದಿನ ಪೀಳಿಗೆಗೆ ರಕ್ಷಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸಿಆರ್‌ಪಿಎಫ್‌ನ ಮಹಾನಿರ್ದೇಶಕ ಸನದ್ ಕೋಮಲ್ ಮಾತನಾಡಿ, ನಾವು ಯಾವ ಜಾಗದಲ್ಲಿ ವಾಸಿಸುತ್ತೇವೋ ಅದಕ್ಕಿಂತ ವಿಭಿನ್ನವಾದ ಸ್ಥಳದ ಪರಿಚಯ ಮಾಡಿಸುವ ಉದ್ದೇಶ ಈ ಕಾರ್ಯಕ್ರಮದಲ್ಲಿದೆ. ಜಾರ್ಖಂಡ್, ಬಿಹಾರ ರಾಜ್ಯದ ಹಿಂದುಳಿದ ಪ್ರದೇಶದ ಮಕ್ಕಳನ್ನು ಬೆಂಗಳೂರಿನಂತಹ ನಗರಕ್ಕೆ ಕರೆಸಿ, ಕಾರ್ಯಕ್ರಮ ಮಾಡಿಸುತ್ತಿರುವುದು ಸಂತಸದ ಸಂಗತಿ. ಕನಸು, ಗುರಿಗಳನ್ನು ದೊಡ್ಡದಾಗಿಟ್ಟುಕೊಂಡಲ್ಲಿ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.
ಇಂದಿನ ಯುಗದಲ್ಲಿ ನೀವು ಏನಾಗಬೇಕೆಂದು ಆಸೆ ಪಡುತ್ತೀರೋ ಅದನ್ನು ಸಾಧಿಸಬಹುದಾಗಿದೆ. ನಾವು ಕಾಣುವ ಕನಸು ದೊಡ್ಡದಿದ್ದರೆ ಜೀವನದಲ್ಲಿ ಯಾವ ಹಂತಕ್ಕೆ ಬೇಕಾದರೂ ಬೆಳೆಯಬಹುದು. ಸರ್ಕಾರ ಮತ್ತು ಅಧಿಕಾರಿಗಳು ನಿಮಗೆ ಅಗತ್ಯವಿರುವ ಸಹಾಯ ಮಾಡುತ್ತಾರೆ. ಅವರಿಂದ ಸೂಕ್ತ ಮಾರ್ಗದರ್ಶನ ಪಡೆಯುಬಹುದಾಗಿದೆ. ಈಗ ಆಯೋಜನೆಯಾಗಿರುವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸಾಕಷ್ಟು ಹೊಸತವನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.