ಉಸ್ತುವಾರಿ ಸಚಿವರಿದ್ದರೂ , ಸಮಾರಂಭ ಬಹಿಷ್ಕರಿಸಿದ ಶಾಸಕಿ ರೂಪಾಲಿ ನಾಯ್ಕ‌

Mla Rupali naik
ಅಧಿಕಾರಿಗಳು  ಆಹ್ವಾನ ನೀಡಿಲ್ಲ ಎಂಬ ಮುನಿಸು: ಉಸ್ತುವಾರಿ ಸಚಿವರಿದ್ದರೂ , ಸಮಾರಂಭ ಬಹಿಷ್ಕರಿಸಿದ ಶಾಸಕಿ ರೂಪಾಲಿ ನಾಯ್ಕ‌

ಕಾರವಾರ :  ತಾಲೂಕಿನ ಅಮದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಗೆ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಅನುಮತಿಯನ್ನೂ ಪಡೆಯದೆ, ಅಧಿಕೃತವಾಗಿ ಆಹ್ವಾನಿಸದೆ ಇರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣವಾಗಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಿ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ ಘಟನೆ ಬೆಳಕಿಗೆ ಬಂದಿದೆ.‌
ಇಂದು  ಮಂಳವಾರ ಜ. ೨೬ ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ನಿಗದಿಪಡಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಕನಿಷ್ಠಪಕ್ಷ ಶಾಸಕರಿಗೆ ಮುಂಚಿತವಾಗಿ ತಿಳಿಸುವ ಅಥವಾ ಅವರಲ್ಲಿ ಅಂದಿನ ಸಮಯ ಕೇಳುವ ಕನಿಷ್ಠ ಸೌಜನ್ಯವನ್ನೂ ತೋರಿಸದೆ ಏಕಾಏಕಿ ದಿನಾಂಕ ನಿಗದಿಪಡಿಸಿದ್ದಾರೆ ಎಂದು ಶಾಸಕರು 
ಅಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದು, ಕಾರ್ಯಕ್ರಮ‌ ಬಹಿಷ್ಕರಿಸಿದ ಘಟ‌ನೆ ನಡೆದಿದೆ.
ನಂತರ ಶಾಸಕರಿಗೆ ಅಧಿಕೃತ ಆಹ್ವಾನವನ್ನೂ ನೀಡಿಲ್ಲ. ಅಮದಳ್ಳಿ ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೂ ತರದೆ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅದರಲ್ಲೂ ಗ್ರಾಪಂನ ಕೆಲವು ಸದಸ್ಯರ ಹೆಸರನ್ನು ಮಾತ್ರ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಆಮಂತ್ರಣ ಪತ್ರಿಕೆಯನ್ನು ಜನವರಿ 25ರ ಸಂಜೆ ಗ್ರಾಮ ಪಂಚಾಯತಿಗೆ ತಲುಪಿಸಿದ್ದಾರೆ. ಇದರಿಂದ ಗ್ರಾಮ ಪಂಚಾಯತ್ ಸದಸ್ಯರಿಗೂ ಆಮಂತ್ರಣ ಪತ್ರಿಕೆ ದೊರೆತಿಲ್ಲ. 
ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಉದ್ಘಾಟನೆ ನಿಗದಿಪಡಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕ್ರಮವನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ  ರೂಪಾಲಿ ಎಸ್.ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ. 
ಅಮದಳ್ಳಿಯ ಗ್ರಾಮ ಪಂಚಾಯತ್ ಸದಸ್ಯರೂ ಕೂಡ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದು, ತಮ್ಮ ಊರಿನಲ್ಲಿಯೇ ನಿರ್ಮಾಣವಾದ ಆಸ್ಪತ್ರೆ ಉದ್ಘಾಟನೆಗೆ ತಮ್ಮನ್ನು ಕತ್ತಲೆಯಲ್ಲಿ ಇಟ್ಟಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಂದೆ ಜನಪ್ರತಿನಿಧಿಗಳಿಗೆ ಗೌರವ ಕೊಡದೆ, ಸಮರ್ಪಕ ಮಾಹಿತಿ ನೀಡದೆ ಇದ್ದಲ್ಲಿ ಸಹಿಸಲು ಸಾಧ್ಯವಿಲ್ಲ. ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಆಗ್ರಹಿಸುವುದಾಗಿ ಶಾಸಕರಾದ  ರೂಪಾಲಿ ಎಸ್. ನಾಯ್ಕ ಎಚ್ಚರಿಸಿದ್ದಾರೆ.