ಸತಾರದಲ್ಲಿ ಈ ಬಾರಿ ನಡೆಯಲಿದೆ ಪವಾಡ: ಶರದ್ ಪವಾರ್

 ಸತಾರ, ಅ19:   ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಆರ್ಭಟ ಜೋರಾಗಿದ್ದು ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಸತಾರದಲ್ಲಿ ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಚುನಾವಣಾ ಭಾಷಣ ಮುಂದುವರಿಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಭಾಷಣದ ವೀಡಿಯೋ ಈಗ ರಾಜಕೀಯ ವಲಯದಲ್ಲಿ ಭಾರಿ ಮಿಂಚಿನ ಸಂಚಲನ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಪವಾರ್ ಲೋಕಸಭಾ ಚುನಾವಣೆಯಲ್ಲಿ ಸತಾರದಿಂದ ಸ್ಪರ್ಧಿಸುವ ಸಾಹಸ ಮಾಡಿರಲಿಲ್ಲ ಎಂದು ಟೀಕಿಸಿದ್ದರು. ಸತಾರದಿಂದ ಎನ್ಸಿಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಶಿವಾಜಿ ಮಹಾರಾಜ್ರ ವಂಶಸ್ಠ ಉದಯನ್ರಾಜೇ ಭೋಸಲೆ ಇತ್ತೀಚೆಗೆ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಈಗ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 'ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಬೇಕು. ನಾನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ವೇಳೆ ತಪ್ಪು ಮಾಡಿದೆ. ಇದನ್ನು ನಾನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವೆ. ಆದರೆ, ತಪ್ಪನ್ನು ಸರಿಪಡಿಸಿಕೊಳ್ಳಲು ನನಗೆ ಖುಷಿಯಾಗುತ್ತಿದೆ. ಜೊತೆಗೆ ಉತ್ತಮ ಅವಕಾಶ  ಸಿಕ್ಕಿದೆ ಸತಾರದ ಪ್ರತಿಯೊಬ್ಬ ಯುವಕ ಹಾಗೂ ವಯೋವೃದ್ಧರು ಸಹ  ಸೋಮವಾರದ ಚುನಾವಣೆಗಾಗಿ ಕಾಯುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸತಾರದಲ್ಲಿ ಪವಾಡ ನಡೆಯಲಿದೆ ಎಂದು ಪವಾರ್ ಹೇಳಿದ್ದಾರೆ.