ಫೆಬ್ರವರಿ 6 ರಂದು ಅರ್ಹ 10, ಮೂಲ ಬಿಜೆಪಿಯ ಮೂವರಿಗೆ ಮಂತ್ರಿಯೋಗ

ಬೆಂಗಳೂರು, ಫೆ 2-ಬಹುನಿರೀಕ್ಷಿತ ರಾಜ್ಯ ಮಂತ್ರಿ ಮಂಡಲಕ್ಕೆ ನೂತನ ಸಚಿವರನ್ನು ಸೇರ್ಪಡಮಾಡಿಕೊಳ್ಳಲು ಕೊನೆಗೂ ಮೂಹೂರ್ತ ನಿಗದಿಯಾಗಿದ್ದು, ಫೆಬ್ರವರಿ 6ರಂದು ಬೆಳಿಗ್ಗೆ 10.30ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ವಿಧಾನಸಭೆ ಉಪ ಚುನಾವಣೆಯಲ್ಲಿ ಗೆದ್ದ ೧೧ ಮಂದಿ ಶಾಸಕರು, ಮೂಲ ಬಿಜೆಪಿಯ ಮೂವರು ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದರು.

ಮಂತ್ರಿಮಂಡಲಕ್ಕೆ ಸೇರ್ಪಡೆಯಾಗುವವರ ಬಗ್ಗೆ ಯಡಿಯೂರಪ್ಪ ಗುಟ್ಟುಬಿಟ್ಟುಕೊಟ್ಟಿಲ್ಲ. ಅಲ್ಲದೇ ಸಂಪುಟ ವಿಸ್ತರಣೆ ಮಾಡುತ್ತೀರೋ ಅಥವಾ ಪುನರ್ ರಚನೆ ಮಾಡುತ್ತೀರೋ ಎನ್ನುವ ಪ್ರಶ್ನೆಗೂ ಖಚಿತ ಉತ್ತರ ನೀಡಿಲ್ಲ. ಈ ಕುರಿತು ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆಯಲ್ಲಿ ಪರಾಭವಗೊಂಡಿರುವ ಹೆಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ, ಸುಪ್ರೀಂಕೋರ್ಟ್‌ನ ತೀರ್ಪಿನ ಅನುಸಾರ ಸೋತವರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದರು. 

ಮೇಲ್ಮನೆಯಲ್ಲಿ ಖಾಲಿ ಉಳಿದಿರುವ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಪಕ್ಷೇತರ ಶಾಸಕರಾಗಿದ್ದ ಆರ್. ಶಂಕರ್ ಅವರಿಗೆ ಅವಕಾಶ ಕಲ್ಪಿಸುವ ಕುರಿತ ಪ್ರಶ್ನೆಗೆ, ಆರ್.ಶಂಕರ್ ಅವರಿಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ವಿಧಾನಪರಿಷತ್‌ಗೆ ನಾಮಕರಣ ಮಾಡಿ ಸಚಿವರನ್ನಾಗಿಯೂ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಈ ತಿಂಗಳ ೧೭ ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಅದಕ್ಕೆ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬ ಉದ್ದೇಶದಿಂದ ಸಂಪುಟ ದಿನಾಂಕ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲೆಗೆ ಹೆಚ್ಚು ಪ್ರಾತಿನಿಧ್ಯ ನೀಡುವುದು ಅನಿವಾರ್ಯವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಹಾಗೂ ತಾವು ಮುಖ್ಯಮಂತ್ರಿಯಾಗಲು ತ್ಯಾಗ ಮಾಡಿದವರಿಗೆ ನೀಡಿದ್ದ ವಾಗ್ದಾನ ಈಡೇರಿಸುತ್ತೇವೆ. ಈ ವಿಷಯದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.

ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಬೈರತಿ ಬಸವರಾಜು, ಡಾ. ಕೆ. ಸುಧಾಕರ್, ಬಿ.ಸಿ. ಪಾಟೀಲ್,

ನಾರಾಯಣಗೌಡ, ಶ್ರೀಮಂತ ಪಾಟೀಲ್, ಶಿವರಾಮ ಹೆಬ್ಬಾರ್, ಆನಂದ ಸಿಂಗ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಮಹೇಶ್ ಕಮಟಳ್ಳಿ, ಶ್ರೀಮಂತ ಪಾಟೀಲ್ ಅವರಿಗೆ ನಿರಾಶೆಯಾಗಿದೆ.

ಮೂಲ ಬಿಜೆಪಿಯಿಂದ ಉಮೇಶ್ ಕತ್ತಿ, ಸಿ.ಪಿ. ಯೋಗೇಶ್ವರ್ ಮತ್ತು ಅರವಿಂದ ಲಿಂಬಾವಳಿ ಹೆಸರು ಅಂತಿಮಗೊಂಡಿದೆ.

ಅದರೆ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಪ್ರಕ್ರಿಯೆ ತೀವ್ರಗೊಂಡಿದೆ.

ಬಿಜೆಪಿ ಹಿರಿಯ ಶಾಸಕ ರಾಮ್‌ದಾಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೈಸೂರು ಭಾಗದಿಂದ ಯಾರು ಸಚಿವರಾಗಿಲ್ಲ. ಹಾಗಾಗಿ, ಮೈಸೂರು ಭಾಗಕ್ಕೆ ಸಚಿವಸ್ಥಾನ ನೀಡುವಂತೆ ಮನವಿ ಮಾಡಿದರು. ಮೈಸೂರು ಭಾಗದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ತಮಗೆ ಸಚಿವ ಸ್ಥಾನ ನೀಡಿ ಮೊದಲಿನಿಂದಲೂ ಪಕ್ಷಕ್ಕೆ ನಿಷ್ಠನಾಗಿದ್ದೇನೆ ಎಂದು ರಾಮ್‌ದಾಸ್ ಹೇಳಿದರು ಎನ್ನಲಾಗಿದೆ.

ತಮಗೆ ಸಚಿವ ಸ್ಥಾನ ಕೈ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಕುಮಟಳ್ಳಿ ತಮಗೆ ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡಿರುತ್ತೇನೆ ಎಂದು ತೀವ್ರ ನೋವಿನಿಂದ ಹೇಳಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾವು ಎಲ್ಲವನ್ನು  ತ್ಯಾಗ ಮಾಡಿದ್ದೇವೆ. ರಮೇಶ್ ಜಾರಕಿ ಹೊಳಿ ಅವರ ನಂತರದ ಸ್ಥಾನ ನನಗೆ ನೀಡಬೇಕಿತ್ತು. ಈವರೆಗೂ ನಾನಿನ್ನು ಯಾರನ್ನು ಭೇಟಿಯಾಗಿಲ್ಲ. ನನಗೆ ಮಂತ್ರಿ ಸ್ಥಾನ ನೀಡುತ್ತಿಲ್ಲ ಎಂಬ ಮಾಹಿತಿ ಇದೆ. ಏಕೆ ಎಂದು ಗೊತ್ತಿಲ್ಲ. ನನಗೆ ನೀಡದಿದ್ದರೂ ಪರವಾಗಿಲ್ಲ ಎಂದು ಹೇಳಿದರು.