ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ: ತಾಳಿಕೋಟಿಯಲ್ಲಿ ರಜಪೂತ ಸಮಾಜದಿಂದ ಸಂಭ್ರಮಾಚರಣೆ

ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ: ತಾಳಿಕೋಟಿಯಲ್ಲಿ ರಜಪೂತ ಸಮಾಜದಿಂದ ಸಂಭ್ರಮಾಚರಣೆ  Ministerial post for Dr. Ajay Singh: Rajput community celebrates in Talikoti

ತಾಳಿಕೋಟಿ 04 : ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ತಾಳಿಕೋಟಿಯಲ್ಲಿ ರಜಪೂತ ಸಮಾಜದ ಬಾಂಧವರು ಹಾಗೂ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.  ಪಟ್ಟಣದ ಮಹಾರಾಣಾ ಪ್ರತಾಪ್ ಸಿಂಹ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಮಾಜದ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಹಾಗೂ ಡಾ. ಅಜಯಸಿಂಗ್ ಪರ ಘೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಿಜಯಸಿಂಗ್ ಹಜೇರಿ, ಭರತಸಿಂಗ್ ವಿಜಾಪುರ, ಗೋವಿಂದಸಿಂಗ್ ಮೂಲಿಮನಿ ಹಾಗೂ ಬಾಬಾ ಪಟೇಲ ಗುಡ್ನಾಳ ಮಾತನಾಡಿ, ಜೇವರ್ಗಿ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.  ಡಾ. ಅಜಯಸಿಂಗ್ ಅವರು ಈ ಹಿಂದೆ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ,

ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕಾಗಿ ಕಾಂಗ್ರೆಸ್ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದರು.  ಕಾರ್ಯಕ್ರಮದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ ಸೇರಿದಂತೆ ಸಮಾಜದ ಮುಖಂಡರು, ಸದಸ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.