ಬೆಂಗಳೂರು, ಫೆ 5 : ರಾಜ್ಯ ಮಂತ್ರಿ ಮಂಡಲ ಗುರುವಾರ ವಿಸ್ತರಣೆಯಾಗಲಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ
ಚುನಾವಣೆಯಲ್ಲಿ ಗೆದ್ದಿರುವ ಹತ್ತು ಮತ್ತು ಮೂಲ ಬಿಜೆಪಿಯ ಇಬ್ಬರು ಅಥವಾ ಮೂವರು ಸಚಿವರಾಗಿ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಸೇರಿ ಹಲ ಪ್ರಮುಖರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ. ಸಿ.ಪಿ ಯೋಗೇಶ್ವರ್ ಸಂಪುಟಕ್ಕೆ ಸೇರುವ ವಿಚಾರ ಡೋಲಾಯಮಾನವಾಗಿದೆ. ಯೋಗೇಶ್ವರ್ ಸೇರ್ಪಡೆಗೆ ತೀವ್ರ ವಿರೋಧವ್ಯಕ್ತವಾಗಿದೆ.
ಬೆಳಿಗ್ಗೆ ೧೦:೩೦ ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಅವರು ಗೌಪ್ಯತಾಪ್ರತಿಜ್ಞಾ ಪ್ರತಿಜ್ಞಾ ವಿಧಿ ಭೋಧಿಸಲಿದ್ದಾರೆ. ಇದಕ್ಕಾಗಿ ರಾಜಭವನದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಎಷ್ಟು ಮಂದಿ ಸಂಪುಟ ಸೇರಲಿದ್ದಾರೆ ಎಂಬುದು ಗುರುವಾರ ಬೆಳಿಗ್ಗೆ ಇತ್ಯರ್ಥವಾಗಲಿದೆ.
ಈ ಮುನ್ನ ಮಂತ್ರಿ ಮಂಡಲಕ್ಕೆ ಹೊರಗಿನಿಂದ ಬಂದು ಶಾಸಕರಾದವರ ಪೈಕಿ ಹತ್ತು ಮಂದಿ ಹಾಗೂ ಬಿಜೆಪಿಯ ಮೂರು ಮಂದಿ ಮಂತ್ರಿಗಳಾಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿತ್ತು. ಆದರೆ ಬಿಜೆಪಿಯಿಂದ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವವರ ಪಟ್ಟಿಯಲ್ಲಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಯಾವ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು ಎಂಬ ಕೂಗು ಬಿಜೆಪಿಯಲ್ಲೇ ದಟ್ಟವಾಗುತ್ತಿರುವುದರಿಂದ ವರಿಷ್ಟರು ತಮ್ಮ ನಿಲುವು ಬದಲಿಸುತ್ತಾರೆಯೇ ಎನ್ನುವ ಪ್ರಶ್ನೆ ಎದ್ದಿದೆ.
ಹೀಗಾಗಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವವರ ಸಧ್ಯದ ಪಟ್ಟಿಯಲ್ಲಿ ಹನ್ನೆರಡು ಮಂದಿಯ ಹೆಸರುಗಳು ಮಾತ್ರ ಇದ್ದು ಸಿ.ಪಿ.ಯೋಗೇಶ್ವರ್ ಅವರ ಹೆಸರು ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪಟ್ಟು ಹಿಡಿದಿದ್ದರೆ, ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಉಳಿದವರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಯಾವ ಕಾರಣಕ್ಕೂ ಅವರು ಮಂತ್ರಿಯಾಗುವುದು ಬೇಡ ಎಂದು ವರಿಷ್ಟರು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಸಿ.ಪಿ.ಯೋಗೇಶ್ವರ್ ಅವರ ಹೆಸರನ್ನು ಕೈ ಬಿಟ್ಟು ಹೈದರಾಬಾದ್ ಕರ್ನಾಟಕದ ಹಾಲಪ್ಪ ಆಚಾರ್ ಕರಾವಳಿಯ ಅಂಗಾರ ಅಥವಾ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸುವಂತೆ ಸೂಚಿಸಿದ್ದಾರೆ.
ಅಂಗಾರ ಸತತ ಆರು ಬಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಐದು ಬಾರಿ ಗೆದ್ದಿದ್ದಾರೆ. ಹಾಲಪ್ಪ ಆಚಾರ್ ಸಂಘಪರಿವಾರ ಮೂಲದವರು. ಈ ಅಂಶಗಳ ಆಧಾರದ ಮೇಲೆ ಇವರ ಪರವಾಗಿ ಹೈಕಮಾಂಡ್ ನಿಂತಿದೆ ಎನ್ನಲಾಗಿದೆ. ಹೀಗಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರು ೧೨ ಮಂದಿಯೋ?೧೩ ಮಂದಿಯೋ?ಅಥವಾ ೧೫ ಮಂದಿಯೋ?ಎಂಬ ವಿಷಯದಲ್ಲಿ ಇನ್ನೂ ಕುತೂಹಲ ಉಳಿದುಕೊಂಡಿದ್ದು ಗುರುವಾರ ಬೆಳಿಗ್ಗೆ ಈ ಪ್ರಶ್ನೆಗೆ ಉತ್ತರ ದೊರೆಯಲಿದೆ.
ಉಪಚುನಾವಣೆಯಲ್ಲಿ ನಿಂತು ಗೆದ್ದಿರುವ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಗೋಪಾಲಯ್ಯ, ಬಿ.ಸಿ.ಪಾಟೀಲ್, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ನಾರಾಯಣಗೌಡ, ಡಾ. ಸುಧಾಕರ್ ಹಾಗೂ ಆನಂದ್‌ಸಿಂಗ್ ಅವರು ಗುರುವಾರ ಮಂತ್ರಿಗಳಾಗಲಿದ್ದಾರೆ.
ಬಿಜೆಪಿಯಿಂದ ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಮಂತ್ರಿಗಳಾಗುವುದು ಖಚಿತವಾಗಿದೆ. ಈ ಮಧ್ಯೆ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲು ಇಪ್ಪತ್ತಕ್ಕೂ ಹೆಚ್ಚು ಮಂದಿ ನಿರಂತರ ಯತ್ನ ನಡೆಸುತ್ತಲೇ ಇದ್ದು ತಮಗಿರುವ ಸಂಪರ್ಕವನ್ನು ಬಳಸಿಕೊಂಡು ಹೈಕಮಾಂಡ್ ಗೆ ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ತರುತ್ತಿದ್ದಾರೆ.