ಬೆಳಗಾವಿ 15: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕಾರು ಅಪಘಾತ ಪ್ರಕರಣ ಹಿಟ್ ಆ್ಯಂಡ್ ರನ್ ಆಗಿದ್ದು, ಇದರಲ್ಲಿ ಇನ್ನೊಂದು ವಾಹನದ ಪಾತ್ರವಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಬುಧವಾರ ಹೇಳಿಕೆ ನೀಡಿದ್ದಾರೆ.
ಅಪಘಾತ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಪಿ ನಿನ್ನೆ ಸಚಿವೆ ಹೆಬ್ಬಾಳ್ಕರ್ ಅವರ ಸರಕಾರಿ ವಾಹನ ಅಪಘಾತಕ್ಕೀಡಾಯಿತು.ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು,ಚಾಲಕ ಶಿವಪ್ರಸಾದ ದೂರು ಕೊಟ್ಟಿದ್ದಾರೆ. ಕಾರಿನಲ್ಲಿ ಡ್ರೈವರ್, ಸಚಿವೆ, ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಮತ್ತು ಗನ್ ಮ್ಯಾನ್ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿಸಿದರು.
ಮೊದಲು ಗನ್ ಮ್ಯಾನ್ ಈರಪ್ಪ ದೂರು ಕೊಟ್ಟರು, ಅದರಲ್ಲಿ ನಿಖರವಾದ ಮಾಹಿತಿ ಇರಲಿಲ್ಲ. ಆ ಬಳಿಕ ಡ್ರೈವರ್ ಶಿವಪ್ರಸಾದ್ ನಿಖರವಾದ ಮಾಹಿತಿ ನೀಡಿದ್ದಾರೆ.
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಹತ್ತಿರ ನಾಯಿ ಅಡ್ಡ ಬಂದ ವೇಳೆ ಮುಂದಿನಿಂದ ಕಂಟೇನರ್ ಟ್ರಕ್ ಎಡ ಬದಿಗೆ ಬಂದಿದ್ದು, ಕಾರಿಗೆ ಟ್ರಕ್ ತಾಗುತ್ತಿದ್ದುದರಿಂದ ಆಗುವ ಅಪಘಾತ ತಪ್ಪಿಸಲು ಎಡಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ ಕಾರು ಸರ್ವೀಸ್ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ. ಆಕ್ಸಿಡೆಂಟ್ ನಲ್ಲಿ ಕಂಟೇನರ್ ಟ್ರಕ್ ಪಾತ್ರವಿದೆ. ಕಂಟೇನರ್ ಟ್ರಕ್ ಪತ್ತೆಗೆ ಕೆಲಸ ಮಾಡುತ್ತಿದ್ದೇವೆ. ಇದು ಹಿಟ್ ಆ್ಯಂಡ್ ರನ್ ಪ್ರಕರಣ ಆಗಿದೆ” ಎಂದರು.
ಪೊಲೀಸರು ಬರುವ ಮುನ್ನವೇ ಅಪಘಾತಕ್ಕೀಡಾದ ಕಾರು ತೆಗೆದುಕೊಂಡು ಹೋಗಿದ್ದರ ಬಗ್ಗೆ ತನಿಖೆ ಮಾಡುತ್ತೇವೆ. ತನಿಖೆಯನ್ನು ಪೊಲೀಸರು ಆರಂಭಿಸಿದ್ದು, ಸ್ಥಳ ಪರಿಶೀಲನೆ ಬಳಿಕ ವಾಸ್ತವಂಶ ಗೊತ್ತಾಗಿದೆ ಎಂದು ತಿಳಿಸಿದರು.
ನಮ್ಮ ಪ್ರಕಾರ ಇದೊಂದು ಅಪಘಾತ ಆದರೂ ನಾವು ಎಲ್ಲಾ ಆಯಾಮದಿಂದ ತನಿಖೆ ಮಾಡುತ್ತೇವೆ. ಪೂರ್ವ ನಿಯೋಜಿತ ಅಲ್ಲವೇ ಅಲ್ಲ” ಎಂದ ಗುಳೇದ್ ಸ್ಪಷ್ಟನೆ ನೀಡಿದರು.