ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಸಾಧನೆಗೈಯ್ಯಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕರೆ

ಗುರಿ ಹೊಂದಿದಾಗ ಮಾತ್ರ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ

ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಸಾಧನೆಗೈಯ್ಯಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕರೆ 

ವಿಜಯಪುರ 27: ಜೀವನದಲ್ಲಿ  ಪ್ರತಿಯೊಬ್ಬರು ಗುರಿಯನ್ನಿಟ್ಟುಕೊಳ್ಳಬೇಕು. ಗುರಿ ಹೊಂದಿದಾಗ ಮಾತ್ರ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜೀವನದಲ್ಲಿನ ಎಲ್ಲ ಕಷ್ಟ ಕಾರ​‍್ಪಣಯಗಳನ್ನು ಸಮರ್ಥವಾಗಿ ಎದುರಿಸಿ ಉತ್ತಮ ಸಾಧನೆಗೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು ಕರೆ ನೀಡಿದರು.  

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ 'ಶಕ್ತಿ ಸಂಭ್ರಮ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಅತ್ಯಂತ ಶಿಸ್ತು ಪ್ರದರ್ಶಿಸುವ ಕಾರ್ಯಕ್ರಮ ಇದಾಗಿದೆ. ಒಬ್ಬ ಮಹಿಳೆಯಾಗಿ, ತಾಯಿಯಾಗಿ, ರೈತನ ಮಗಳಾಗಿ ನಾನು ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ಎಲ್ಲ ಕಷ್ಟ ಕಾರ​‍್ಪಣಯಗಳನ್ನು ಸಮರ್ಥವಾಗಿ ಎದುರಿಸಿ, ಇಂದು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿ, ಸರ್ಕಾರದಲ್ಲಿ ಸಚಿವೆಯಾಗಿದ್ದೇನೆ ಎಂದು ಹೇಳಿದರು.  

  ಒಂದು ಕಾಲದಲ್ಲಿ ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬುದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆ ಇಂದಿನ ದಿನಗಳಲ್ಲಿ ಅಬಲೆಯಲ್ಲ-ಸಬಲೆ ಎಂಬುದು ಸಾಬೀತಾಗಿದೆ. ಮಹಿಳೆಯರು ಸಾಧನೆ ಮಾಡದ ಯಾವುದೇ ಕ್ಷೇತ್ರ ಇಂದು ಉಳಿದಿಲ್ಲ. ಶೈಕ್ಷಣಿಕ, ಕ್ರೀಡಾ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲಿ-ರಂಗಗಳಲ್ಲಿ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ವಿವಿಧ ಮಹನೀಯರ ಸಾಧನೆಗಳಿಂದ ಪ್ರೇರಣೆ ಪಡೆದು ನೀವು ಸಹ ಉತ್ತಮ ಗುರಿಯನ್ನಿಟ್ಟುಕೊಂಡು ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.  

ವಿದ್ಯಾರ್ಥಿ ಘಟ್ಟ ಅತ್ಯಂತ ಸುವರ್ಣ ಅವಧಿ. ಅದರಲ್ಲೂ ಕಾಲೇಜ್ ಘಟ್ಟ ಜೀವನವನ್ನು ರೂಪಿಸಿಕೊಳ್ಳಲು ಅತಿಮುಖ್ಯವಾದ ಘಟ್ಟವಾಗಿದೆ. ಭವಿಷ್ಯವನ್ನು ರೂಪಿಸಿಕೊಳ್ಳಲು, ವಿಕಸನ ಮಾಡಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಉನ್ನತ ಸ್ಥಾನ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಹೇಳಿದರು.  

ಇಂದಿನ ವೈಜ್ಞಾನಿಕ ಯುಗದಲ್ಲಿ ಮಹಿಳೆಯರು ಒಂದಾಗಿ, ಪರಸ್ಪರ, ಸಹಕಾರ ಸಹಾಯ ಮಾಡುವ ಗುಣಧರ್ಮವನ್ನು ಬೆಳೆಸಿಕೊಂಡು. ತಾವೊಬ್ಬರೇ ಸಾಧನೆ ಒಬ್ಬರಿಗೊಬ್ಬರು ಸಹಾಯ ಮಾಡಿ ಮುಂದೆ ಸಾಗುವ ಅವಶ್ಯಕತೆ ಇದೆ. ಇಂದಿನ ಯುಗದಲ್ಲಿ ಮಹಿಳೆಯರು ಛಲದಿಂದ ಬಿಟ್ಟು ಬಿಡದೇ ಸಾಧನೆ ಮಾಡುತ್ತಿರುವುದು ಕಂಡು ನನಗೆ ಅತ್ಯಂತ ಹೆಮ್ಮೆಯೆನಿಸುತ್ತದೆ. ಅದರಲ್ಲೂ ಕೆಲವು  ಮಹಿಳೆಯರ ಸಾಧನೆಗಳು ನಮಗೆ ಪ್ರೇರಣೆಯಾಗಿವೆ  ಎಂದು ಹೇಳಿದರು.  

ಸಕಲ ಜೀವರಾಶಿಗಳಲ್ಲಿ ಮನುಷ್ಯರಾಗಿ ಹುಟ್ಟಿದ್ದು ಪುಣ್ಯವಂತರು. ನಾವು ಮನುಷ್ಯರು, ಸತ್ಯ ಯಾವುದು, ತಪ್ಪು ಯಾವುದು ಎಂದು ವಿಚಾರ ಮಾಡುವ ಶಕ್ತಿ ಆ ಭಗವಂತ ನೀಡಿದ್ದಾನೆ. ಸುಂದರವಾದ ಸಮಾಜ, ದೇಶ, ಸುಂದರವಾದ ಸಂಸ್ಕೃತಿ ನಮ್ಮ ದೇಶದಲ್ಲಿದೆ. ಅನೇಕ  ಮಹನೀಯರ-ಸಾಧಕರ ಈ ನಾಡು. ಇಂತಹ ಮಹನೀಯರ ಮಾರ್ಗದರ್ಶನದಲ್ಲಿ ನಾವು ಸುಂದರ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.  

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಬಿ.ಕೆ.ತುಳಸಿಮಾಲ ಅವರು ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ರಾಜ್ಯದ 30 ಮಹಾವಿದ್ಯಾಲಯಗಳಿಂದ 600 ವಿದ್ಯಾರ್ಥಿನಿಯರು ತಮ್ಮ ಸೃಜನಾತ್ಮಕ ಕಲೆಗಳನ್ನು ಈ ವೇದಿಕೆ ಮೂಲಕ ಪ್ರಸ್ತುತ ಪಡಿಸಲಿದ್ದಾರೆ. ಹಿಂದೂಸ್ತಾನಿ ಕರ್ನಾಟಕ ಶಾಸ್ತ್ರೀಯ ಸಂಗೀತ, ವಿವಿಧ ವಾದ್ಯಗಳ ಸ್ಪರ್ಧೆ, ತಾಳ ವಾದ್ಯ, ಲಘು ಗಾಯನ, ಪಾಶ್ಚಾತ ಸಂಗೀತ, ಸಮೂಹ ಗಾಯನ, ಜಾನಪದ, ಪಾಶ್ಚಿಮಾತ್ಯ ವಾದ್ಯ ಸಂಗೀತ, ನೃತ್ಯ, ಸಾಹಿತ್ಯ ಚಟುವಟಿಕೆ, ರಂಗಭೂಮಿ, ಕಲೆ, ಚಿತ್ರಕಲೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.  

ಶಿಕ್ಷಣದ ಮೂಲಕ ಸಬಲೀಕರಣ, ಆ ಮೂಲಕ ಸ್ವಾವಲಂಬಿ, ಸ್ವಾಭಿಮಾನದ ಜೀವನ ಕಟ್ಟಿಕೊಂಡು ಈ ಸಮಾಜಕ್ಕೆ ಆದರ್ಶ ಮಹಿಳೆಯನ್ನು ನೀಡುವುದು ವಿಶ್ವವಿದ್ಯಾಲಯದ ಮುಖ್ಯ ಧ್ಯೇಯವಾಗಿದೆ. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯವು ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿದೆ. ಸಮಾಜ ಕಾರ್ಯ, ಎನ್‌ಸಿಸಿ, ಎನ್‌ಎಸ್‌ಎಸ್ ಸೇರಿದಂತೆ ವಿವಿಧ ನಿಕಾಯಗಳ ಮೂಲಕ ಸಮಗ್ರ, ಸಂತುಲಿತ ವ್ಯಕ್ತಿತ್ವ ವಿಕಸನಕ್ಕೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದರ ಭಾಗವಾಗಿ ಶಕ್ತಿ ಸಂಭ್ರಮ ಎಂಬ ವಿದ್ಯಾರ್ಥಿನಿಯರ ಸೂಪ್ತವಾಗಿ ಹುದುಗಿರುವ ಕಲೆಗಳನ್ನು ಅನಾವರಣಗೊಳಿಸುವ ವೇದಿಕೆಯನ್ನು ಕಲ್ಪಿಸಿದೆ ಎಂದು ಹೇಳಿದರು.  

ಸಾಂಸ್ಕೃತಿಕ ಕಲಾ ವೈಭವ, ತಮ್ಮಲ್ಲಿರುವ ಪ್ರತಿಭೆ, ಕೌಶಲ್ಯಗಳು, ಹವ್ಯಾಸಗಳು, ಸೃಜನಶೀಲತೆ ಅಭಿವ್ಯಕ್ತಗೊಳಿಸಲು ಈ ವೇದಿಕೆ ಅವಕಾಶ ಕಲ್ಪಿಸಿದೆ. ಸವಾಲುಗಳು ಅವಕಾಶಗಳ ಮಧ್ಯೆ ಗಟ್ಟಿ ಜೀವನ ಕಟ್ಟಿಕೊಳ್ಳಲು ವಿಶ್ವವಿದ್ಯಾಲಯ ಕಲ್ಪಿಸಿರುವ  ಹಲವು ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಳ್ಳಬೇಕು. ವೃತ್ತಿಪರತೆಯೊಂದಿಗೆ ಕೌಶಲ್ಯತೆಯನ್ನು ಹೆಚ್ಚಿಸಿಕೊಂಡು ಸ್ವಾವಲಂಬನೆಯೊಂದಿಗೆ ಸಮೃದ್ದ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.  

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ತಮ್ಮ ಸೃಜನಶೀಲತೆ ಕಲೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು. 

 ತೊರವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮಾಬಾಯಿ ನಡಗಡ್ಡಿ, ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವರಾದ ಎಚ್‌.ಎಂ.ಚಂದ್ರಶೇಖರ, ವಿದ್ಯಾರ್ಥಿನಿ ಕ್ಷೇಮ ಪಾಲನಾ ನಿರ್ದೇಶನಾಲಯದ ನಿರ್ದೇಶಕರಾದ ಪ್ರೊ.ಶಾಂತಾದೇವಿ, ಸಿಂಡಿಕೇಟ್ ಮತ್ತು ಅಕಾಡೆಮಿ ಕೌನ್ಸಿಲ್ ಸದಸ್ಯರು, ಭೋದಕ ಹಾಗೂ  ಭೋದಕೇತರ ಸಿಬ್ಬಂದಿ  ಉಪಸ್ಥಿತರಿದ್ದರು.