ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ
ವಿಜಯಪುರ 21: ವಿಜಯಪುರ ಜಿಲ್ಲೆಗೆ 3 ಸಂಚಾರಿ ಆರೋಗ್ಯ ಘಟಕದ ವಾಹನಗಳು ಮಂಜೂರಾಗಿದ್ದು, ಈಗಾಗಲೇ ವಿಜಯಪುರ ಜಿಲ್ಲೆಗೆ ಬಂದಿರುವ 2 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆಯನ್ನು ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಮತ್ತು ಹೋಬಳಿಗಳು ಗ್ರಾಮಗಳು ಒಳಪಡುವ ರೀತಿಯಲ್ಲಿ ರೂಟ್ ಮ್ಯಾಪ ಸಿದ್ಧಪಡಿಸಿ ನೀಡಲಾಗಿದ್ದು ಆ ರೀತಿಯಲ್ಲಿ ಸಂಚಾರಿ ಆರೋಗ್ಯ ಘಟಕ ವಾಹನಗಳು ಕಾರ್ಯನಿರ್ವಹಿಸುತ್ತವೆ. ಕಾರ್ಮಿಕರು ಕೆಲಸ ಮಾಡುವ ಮತ್ತು ವಾಸಿಸುವ ಸ್ಥಳಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯ ನೋಂದಾಯಿತ ಕಾರ್ಮಿಕರಿಗೆ ಸೌಲಭ್ಯ ಸಿಗುವಂತಹ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಈ ವಾಹನಗಳು ಕಾರ್ಯನಿರ್ವಹಿಸಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಕಾರ್ಮಿಕರಿದ್ದಲ್ಲಿ ಆರೋಗ್ಯ ತಪಾಸಣೆಗೆ ಅನುಕೂಲ ಕಲ್ಪಿಸುವ ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಬುಧವಾರದಂದು ವಿಜಯಪುರ ಜಿಲ್ಲೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಸಂಚಾರಿ ಆರೋಗ್ಯ ಘಟಕದಲ್ಲಿ ಎಮ್.ಬಿ.ಬಿ.ಎಸ್ ವೈದ್ಯರು, ಜಿ ಎನ್ ಎಮ್ ,ಲ್ಯಾಬ ಟೆಕ್ನಿಷಿಯನ್ ಒಳಗೊಂಡಂತೆ 6ಜನ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾರೆ ಈ ಸಂಚಾರಿ ಆರೋಗ್ಯ ಘಟಕದಲ್ಲಿ 25 ವೈದ್ಯಕೀಯ ಉಪಕರಣಗಳು, 05 ಪ್ರಯೋಗಾಲಯದ ಉಪಕರಣಗಳು ಹಾಗೂ 37 ವಿವಿಧ ವೈದ್ಯಕೀಯ ಬಳಕೆ ವಸ್ತುಗಳಿರಲಿವೆ. ಈ ಸಂಚಾರಿ ಆರೋಗ್ಯ ಘಟಕದಲ್ಲಿ ರಕ್ತ ಪರೀಕ್ಷೆ,ಬಿ.ಪಿ, ಶುಗರ, ಹೃದ್ರೋಗ ತಪಾಸಣೆ, ಕಾಮಾಲೆ-ಎ, ಬಿ, ಸಿ ಮತ್ತು ಇ, ಸಿಪ್ಲಿಸ, ಮಲೇರಿಯಾ, ಡೆಂಗ್ಯೂ, ಚಿಕನಗೂನ್ಯಾ, ಲೆಪ್ಟೋಸ್ಪಿರಿಯಾ, ಟೈಫಾಯಿಡ್ ಮತ್ತು ಇತರೆ ಕಾಯಿಲೆಗಳಿಗೆ ಸಂಬಂಧಿಸಿದಂತೆ ರೋಗ ನಿರ್ಣಯ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಸಂಚಾರಿ ಆರೋಗ್ಯ ಘಟಕದ ಕಾರ್ಯನಿರ್ವಹಣೆಯ ಮೇಲ್ನೋಟವನ್ನು ಇಲಾಖೆಯ ಅಧಿಕಾರಿಗಳಾದ ಉಪ ಕಾರ್ಮಿಕ ಆಯುಕ್ತರು, ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಕಾರ್ಮಿಕ ಅಧಿಕಾರಿಗಳು ವಹಿಸುತ್ತಾರೆ. ಜಿಲ್ಲೆಯ ಎಲ್ಲ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರು ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆಯಬೇಕೆಂದು ಅವರು ಮನವಿ ಮಾಡಿಕೊಂಡರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ಕುಮಾರ ಗುಣಾರಿ ಸೇರಿದಂತೆ ಕಾರ್ಮಿಕ ನೀರೀಕ್ಷಕರು, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
(ಫೋಟೋ ಲಗತ್ತಿಸಿದೆ. ಎ-1,2,3)
ಗುಡುಗು-ಸಿಡಿಲು ಪರಿಣಾಮ ತಗ್ಗಿಸಲು ಮುನ್ನೆಚ್ಚರಿಕಾ ಕ್ರಮ ವಹಿಸಿ:
-ಟಿ.ಭೂಬಾಲನ್ ಸೂಚನೆ
ವಿಜಯಪುರ 21: ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಲಾದ ಸಲಹೆ-ಸೂಚನೆಗಳನ್ನು ಜಿಲ್ಲೆಯಾದ್ಯಂತ ಪಾಲಿಸುವಂತೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಮಳೆಯಿಂದಾಗುವ ಹಾನಿ ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಕುರಿತು ಬುಧವಾರ ಎಲ್ಲಾ ತಾಲೂಕಿನಿಂದ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಈ ಸೂಚನೆ ನೀಡಿದರು.
ಗುಡುಗು ಮತ್ತು ಸಿಡಿಲಿನ ಅಪಾಯ ತಗ್ಗಿಸಲು ಸಾಮಾನ್ಯವಾಗಿ ಸಿಡಿಲಿಗೆ ತುತ್ತಾಗುವ ಸ್ಥಳಗಳನ್ನು ಗುರುತಿಸಿ, ಸಾರ್ವಜನಿಕ ಆಸ್ತಿ, ಮೂಲಸೌಕರ್ಯಗಳ ರಕ್ಷಣೆಗೆ ಕ್ರಮ ವಹಿಸಬೇಕು. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಇಂಡಿಯನ್ ಮೆಟ್ರಾಲಾಜಿಕಲ್ ಇಲಾಖೆಯ ಸಿಡಿಲಿನ ಮುನ್ಸೂಚನೆಗಳನ್ನು ಸ್ಥಳೀಯ ಮಟ್ಟಕ್ಕೆ ತಲುಪಿಸಲು ಸಾಮಾಜಿಕ ಮತ್ತು ಇತರ ಸಮೂಹ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ತಿಳುವಳಿಕೆ ಮೂಡಿಸುವುದು ಹಾಗೂ ಈ ಕುರಿತು ರೈತ ಸಂಪರ್ಕ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳು ಹಾಗೂ ಗ್ರಾಮ ಪಂಚಾಯತಿಗಳ ಮೂಲಕ ಮಾಹಿತಿ ನೀಡುವುದು ಮತ್ತು ಜಾಗೃತಿ ಮೂಡಿಸುವುದು.
ಸ್ಥಳೀಯ ಜನರನ್ನು ಎಚ್ಚರಿಸಲು ಹಾಗೂ ಗುಡುಗು ಮತ್ತು ಸಿಡಿಲಿನ ಅಪಾಯಗಳನ್ನು ತಗ್ಗಿಸಲು ಸಲಹೆ ಸೂಚನೆಗಳನ್ನ ನೀಡಲು ಶಾಲೆ, ಕಾಲೇಜುಗಳು, ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು.
ಕೃಷಿ ಇಲಾಖೆಯ ಅಧಿಕಾರಿ-ನೌಕರರು ರೈತ ಸಂಪರ್ಕ ಕೇಂದ್ರಗಳು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧಿಕಾರಿ-ಸಿಬ್ಬಂದಿಗಳು, ಗುಡುಗು ಸಿಡಿಲು ಸಂದರ್ಭದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೃಷಿಕರಿಗೆ, ಕುರಿ ಮೇಕೆ ಹಾಗೂ ಇತರೆ ಜಾನುವಾರುಗಳ ಸಾಕಾಣಿಕೆದಾರರಿಗೆ ಸೂಕ್ತ ಅರಿವು ಮೂಡಿಸಬೇಕು ಎಂದು ಅವರು ಸೂಚನೆ ನೀಡಿದರು.
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆ: ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಹಾಗೂ ಕಾಮನ್ ಅಲರ್ಟ್ ಪ್ರೋಟೋಕಾಲ್ ಮೂಲಕ ಬರುವ ಸಂದೇಶಗಳನ್ನು ಮೊಬೈಲ್ ನಲ್ಲಿ ಗಮನಿಸುವುದು, ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು. ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತಲ್ಲ, ಸುರಕ್ಷಿತವಾದ ಕಟ್ಟಡಗಳ ಆಶ್ರಯ ಪಡೆಯುವುದು, ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು, ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆಯುವುದು, ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರುವುದು, ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ್ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು.
ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು, ಗುಂಪಿನಲ್ಲಿದ್ದರೆ ಅಪಾಯವನ್ನ ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು, ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಮಯವಿಲ್ಲದಿದ್ದರೆ ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳುವುದು, ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು, ಅರಣ್ಯ ಪ್ರದೇಶದಲ್ಲಿದ್ದರೆ ಚಿಕ್ಕ-ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯುವುದು,ಲೋಹದ ವಸ್ತುಗಳು, ದ್ವಿಚಕ್ರ ವಾಹನ, ದೂರವಾಣಿ ಬಳಸಬಾರದು, ತಂತಿ ಬೇಲಿ ಯಂತ್ರಗಳಿಂದ ದೂರವಿರುವುದು, ಕಬ್ಬಿಣದ ಸರಳುಗಳ್ಳುಳ್ಳ ಛತ್ರಿಗಳನ್ನು ಬಳಸಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಬೆಂಕಿ ಮತ್ತು ವಿದ್ಯುತ್ ಸಂಪರ್ಕದಿಂದ ದೂರವಿರುವುದು, ಮಕ್ಕಳು ವಯೋವೃದ್ಧರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸಬೇಕು.
ಗುಡುಗು ಸಿಡಿಲಿನ ಸಂದರ್ಭದಲ್ಲಿ ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರೆ ಯಾವುದೇ ಅವಶೇಷಗಳನ್ನು ತೆಗೆದುಹಾಕಬಾರದು, ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ಹರಿಯುವ ಸಾಧ್ಯತೆ ಇರುವುದರಿಂದ ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಮತ್ತು ಶವರ ತೆಗೆದುಕೊಳ್ಳಬಾರದು, ಪಾತ್ರೆ ತೊಳೆಯಬಾರದು, ಬಟ್ಟೆ ಒಗೆಯಬಾರದು, ಆಟದ ಮೈದಾನ, ಉದ್ಯಾನವನಗಳು, ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಬೇಕು. ಮಿಂಚಿನ ಒಡೆತದಿಂದಾಗಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಇರುವುದರಿಂದ ಅರಣ್ಯ ಪ್ರದೇಶದಿಂದ ದೂರವಿದ್ದು ಗಿಡ ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದೂ ಸೇರಿದಂತೆ ವಿವಿಧ ಸಲಹೆಗಳನ್ನು ನೀಡಲಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
(ಫೋಟೋ ಲಗತ್ತಿಸಿದೆ.)
ಕಲುಷಿತ ನೀರು ಪೂರೈಕೆ, ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಿ
ವಿಜಯಪುರ 21: ಮಳೆಗಾಲದ ಸಂದರ್ಭದಲ್ಲಿ ನೀರು ಕಲುಷಿತವಾಗುವ ಸಂಭವವಿರುವುದರಿಂದ ಕುಡಿಯುವ ನೀರು ಪೂರೈಸುವ ಮುನ್ನ ಭೌತಿಕ ಮತ್ತು ಜೈವಿಕ ಪರೀಕ್ಷೆಗೊಳಪಡಿಸಿ ನೀರು ಪೂರೈಕೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಜರುಗಿದ ವಿಪತ್ತು ನಿರ್ವಹಣಾ ಜಿಲ್ಲಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕುಡಿಯುವ ನೀರು ಪೂರೈಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಮಳೆಗಾಲದ ಸಂದರ್ಭದಲ್ಲಿ ಕಲುಷಿತ ನೀರು ಸೇರಿಕೊಂಡು ಸಾಂಕ್ರಾಮಿಕ ರೋಗಗಳ ಉಲ್ಭಣಕ್ಕೆ ಕಾರಣವಾಗುವುದರಿಂದ ಈ ಕುರಿತು ತೀವ್ರ ಎಚ್ಚರಿಕೆ ವಹಿಸಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ಲೋಪವನ್ನು ಸಹಿಸಲಾಗುವುದಿಲ್ಲ. ಕಲುಷಿತ ನೀರು ಪೂರೈಕೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ ಅವರು, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಸ್ಥಿತಿ ಕುರಿತು ಪರೀಶೀಲನೆ ನಡೆಸಿ ನಡೆಸಿ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ನೀರು ಒಂದೆಡೆ ಸಂಗ್ರಹಗೊಂಡು ಜೂನ್-ಜುಲೈ ಮಾಹೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೀರು ಒಂದೇ ಕಡೆ ನಿಲ್ಲದೇ ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಫಾಗಿಂಗ್ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮ ವಹಿಸಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಚ್ಛತೆ, ಸಾಂಕ್ರಾಮಿಕ ರೋಗಗಳ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಬೇಕು. ಸ್ವಚ್ಛವಾಹಿನಿಯ ಮೂಲಕ ಝಿಂಗಲ್ಸ್ಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅರಿವು- ಜಾಗೃತಿ ಮೂಡಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಅಂಗನವಾಡಿ, ಶಾಲಾ ಕಟ್ಟಡಗಳ ಸ್ಥಿತಿಗತಿ ಕುರಿತು ಪರೀಶೀಲನೆ ನಡೆಸಬೇಕು. ಶಿಥಿಲಾವ್ಯವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಅಡಚಣೆಯಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ಕಟ್ಟಡದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿ ಕಟ್ಟಡ ದುರಸ್ತಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು ಮುಂಜಾಗೃತ ಕ್ರಮವಾಗಿ ಯಾವುದೇ ಜನ ಜಾನುವಾರುಗಳಿಗೆ ಹಾನಿಯಾಗದಂತೆ ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಮಾರ್ಗಗಗಳಲ್ಲಿ ತಂತಿಗಳು ಬೀಳದಂತೆ ಮುನ್ನೆಚ್ಚರಿಗೆ ಕ್ರಮ ವಹಿಸಬೇಕು. ಮಳೆಗಾಲ ಸಂದರ್ಭದಲ್ಲಿ ಗಾಳಿ-ಮಳೆಗೆ ಗಿಡಗಳ ರೆಂಬೆ-ಕೊಂಬೆಗಳು ಬೀಳುವ ಸಂಭವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇಂತಹ ಗಿಡ-ಮರಗಳ ಕೊಂಬೆಗಳ ತೆರವಿಗೆ ಅರಣ್ಯ ಇಲಾಖೆಯಿಂದ ಕ್ರಮ ವಹಿಸಬೇಕು. ರಸ್ತೆ, ಜನನಿಬಿಡ ಪ್ರದೇಶದಲ್ಲಿ ಇಂತಹ ಯಾವುದೇ ಕೊಂಬೆಗಳು ಬಿದ್ದ ಸಂದರ್ಭದಲ್ಲಿಯೂ ಸಹ ಸಾರ್ವಜನಿಕರಿಗೆ ಅಡಚಣೆ ಉಂಟಾಗದಂತೆ ತ್ವರಿತವಾಗಿ ತೆರವುಗೊಳಿಸುವ ಕುರಿತು ತಂಡವೊಂದನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳಬೇಕು. ರಾಜ್ಕಾಲುವೆ, ನಾಲಾ ಸೇರಿದಂತೆ ವಿವಿಧೆಡೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಿ, ಸ್ವಚ್ಛತೆಗೆ ಕ್ರಮ ವಹಿಸಬೇಕು. ತೆರೆದ ಕೊಳೆವೆ ಬಾವಿಗಳು ಇರುವುದರ ಕುರಿತು ಪರೀಶೀಲಿಸಿ ಅಂತಹ ಬಾವಿಗಳಿದ್ದಲ್ಲಿ ತಕ್ಷಣ ಮುಚ್ಚಲು ಕ್ರಮ ವಹಿಸಿ, ಕೈಗೊಂಡಿರುವ ಕ್ರಮ ಕುರಿತು ವರದಿ ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ತೆರೆದ ಬಾವಿಗಳ ಕುರಿತು ವರದಿ ನೀಡುವಂತೆ ಅವರು ಸೂಚನೆ ನೀಡಿದರು.
ಮುಂಗಾರು ಪೂರ್ವ ಮಳೆಯಾಗುತ್ತಿದ್ದು ಜಿಲ್ಲೆಯಲ್ಲಿ ರೈತರು ಭೂಮಿ ಉಳುಮೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಸಮರ್ಕವಾಗಿ ಉತ್ತಮ ಗುಣಮಟ್ಟದ ಬೀಜಗಳನ್ನು ವಿತರಣೆ ಮಾಡಬೇಕು. ಯಾವುದೇ ಕೊರತೆ ಉಂಟಾಗದಂತೆ ಅಗತ್ಯ ಬೀಜ-ರಸಗೊಬ್ಬರವನ್ನು ದಾಸ್ತಾನಿಟ್ಟುಕೊಳ್ಳಬೇಕು. ರೈತರ ಬೇಡಿಕೆಗನುಗುಣವಾಗಿ ಬೀಜ-ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಬೇಕು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಖಾಸಗಿ ರಸಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಹೆಚ್ಚಿನ ಬೆಲೆಗೆ ರಸ ಗೊಬ್ಬರಗಳನ್ನು ಮಾರಾಟ ಮಾಡದಂತೆ ಮಾರಾಟಗಾರರಿಗೆ ಸೂಕ್ತ ತಿಳಿ ಹೇಳಬೇಕು. ಒಂದು ವೇಳೆ ಹೆಚ್ಚಿನ ಬೆಲೆಗೆ ಮಾರಾಟ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನಿನ್ವಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿನ ಮಾರಾಟಗಾರರು ಗ್ರಾಹಕರಿಗೆ ಕಾಣುವಂತೆ ದರ ಪಟ್ಟಿ ಫಲಕಗಳನ್ನು ಅಂಗಡಿಗಳಲ್ಲಿ ಅಳವಡಿಸಿರಬೇಕು. ಈ ಕುರಿತು ಕೃಷಿ ಇಲಾಖೆಯ ತನಿಖಾಧಿಕಾರಿಗಳು ಕಾಲಕಾಲಕ್ಕೆ ಅಂಗಡಿಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಬೇಕು. ಡಿಎಪಿ ಹಾಗೂ ಯೂರಿಯಾ ರಸಗೊಬ್ಬರಗಳ ಅನಧಿಕೃತ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ತೀವ್ರ ನಿಗಾ ಇರಿಸುವಂತೆ ಅವರು ಸೂಚನೆ ನೀಡಿದರು.
ತಹಶೀಲ್ದಾರರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಮರ್ಕ ವಿತರಣೆಯನ್ನು ನೋಡಿಕೊಳ್ಳಬೇಕು. ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇತರೆ ಸಂಯುಕ್ತ ರಸಗೊಬ್ಬರಗಳ ಬಳಕೆ ಮಾಡುವ ರೈತರಿಗೆ ಸೂಕ್ತ ತಿಳುವಳಿಕೆ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಳ ಮೀಸಲಾತಿ ಕುರಿತು ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ಕಾರ್ಯ ನಡೆದಿದ್ದು ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚಿಸಿದ ಅವರು ಪ್ರತಿ ಮನೆ ಮನೆಗೂ ಭೇಟಿ ನೀಡಬೇಕು. ಯಾವುದೇ ಪರಿಶಿಷ್ಟ ಜನಾಂಗದ ಮನೆ ಕೈ ಬಿಟ್ಟು ಹೋಗದಂತೆ ಪ್ರತಿ ವ್ಯಕ್ತಿಯ ಸಮೀಕ್ಷೆ ಕಾರ್ಯ ನಡೆಯಬೇಕು. ಜಿಲ್ಲಾಡಳಿತದಿಂದ ಸಮೀಕ್ಷಾ ಕಾರ್ಯಕ್ಕೆ ಅಗತ್ಯವಿದ್ದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ತೊಗರಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ಹಾಗೂ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳ ಬಳಕೆ ಮಾಹಿತಿ ಕರಪತ್ರ ಹಾಗೂ ರೈತರ ಸಮಗ್ರ ಬೆಳೆ ನಿರ್ವಹಣೆ ಕುರಿತ ಕರ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
(ಫೋಟೋ ಲಗತ್ತಿಸಿದೆ.)
ಭಯೋತ್ಪಾಧನಾ ವಿರೋಧಿ ದಿನ ಆಚರಣೆ: ಪ್ರತಿಜ್ಞೆ ಬೋಧಿಸಿದ ಜಿಲ್ಲಾಧಿಕಾರಿ ವಿಜಯಪುರ 21: ಭಯೋತ್ಪಾಧನಾ ವಿರೋಧಿ ದಿನ ಆಚರಣೆ ಅಂಗವಾಗಿ ಜಿಲ್ಲಾಧಿಕಾರಿಯ ಕಚೇರಿಯ ಕೆಸ್ವಾನ ಸಭಾಂಗಣದಲ್ಲಿ ನಡೆದ ಮಳೆಯಿಂದಾಗುವ ಹಾನಿಗಳ ತಡೆಗಟ್ಟುವ ಕ್ರಮಗಳ ಕೈಗೊಳ್ಳುವ ಮುನ್ನೇಚರಿಕಾ ಕ್ರಮಗಳ ಕುರಿತು ಬುಧವಾರ ನಡೆದ ಸಭೆಯ ಆರಂಭಕ್ಕೂ ಮೊದಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಭಯೋತ್ಪಧನಾ ವಿರೋಧಿ ದಿನದ ಅಂಗವಾಗಿ ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುತ್ತೇವೆ. ನಮ್ಮ ಸಹಬಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವನ್ನು ಸಾಧಿಸಲು ಹಾಗೂ ಉತ್ತೇಜಿಸಲು ಮತ್ತು ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಪಣ ತೊಡುತ್ತೇವೆ ಎಂದು ಪ್ರತಿಜ್ಞೆ ಬೋಧಿಸಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ರಿಷಿ ಆನಂದ, ಅಪ್ಪರ ಜಿಲ್ಲಾಧಿಕಾರಿ ಸೊಮಲಿಂಗ ಗೆಣ್ಣೂರ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
(ಫೋಟೋ ಲಗತ್ತಿಸಿದೆ.)
ವಿವಿಧ ವೃತ್ತಿಪರ ಕೋರ್ಸ್ ಗಾಗಿ ಅರ್ಜಿ ಆಹ್ವಾನ
ವಿಜಯಪುರ 21: ಬಬಲೇಶ್ವರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್-2025ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್ಗಾಗಿ ಆನ್ಲೈನ್ ಮೂಕಲ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಿತಿತಿ.ಛಿಣಜ.ಞಚಿಡಿಟಿಚಿಣಚಿಞಚಿ.ರಠ.ಟಿ ವೆಬ್ಸೈಟ್ ನಲ್ಲಿ ಮೇ. 28ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಬಲೇಶ್ವರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರ ಕಚೇರಿ ಮೊ.ಸಂ: 9844793970, 9886591700, 8618365416, 9036637681, 7353695555, 9900627197, 8904416126 ಹಾಗೂ 7026084602ಗೆ ಸಂಪರ್ಕಿಸಬಹುದಾಗಿದೆ ಎಂದು ಬಬಲೇಶ್ವರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಿಲಿಟರಿ ಬಾಲಕರ ವಸತಿ ನಿಲಯ: ಅರ್ಜಿ ಆಹ್ವಾನ
ವಿಜಯಪುರ 21: ಜಿಲ್ಲೆಯ ಮಿಲಿಟರಿ ಬಾಲಕರ ವಸತಿ ನಿಲಯದಲ್ಲಿ 2025-26ನೇ ಸಾಲಿನ 6ನೇ ತರಗತಿಯಿಂದ 10ನೇ ತರಗತಿ, ಪಿ.ಯು.ಸಿ ಹಾಗೂ ಡಿಪ್ಲೋಮಾದಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಗಂಡು ಮಕ್ಕಳಿಂದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೇ. 31ರೊಳಗಾಗಿ ಜಿಲ್ಲೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08352-250913 ಹಾಗೂ 9411561885 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.