ಬೆಂಗಳೂರು, ನ 02: ಎಫ್ ಟಿ ಎ ಅಡಿಯಲ್ಲಿ ಬೇರೆ ದೇಶದ ಹಾಲು ಉತ್ಪನ್ನಗಳನ್ನು ಇತರೆ ದೇಶಗಳಲ್ಲಿ ಮಾರಾಟ ಮಾಡಲು
ಅವಕಾಶ ಮಾಡಿಕೊಡುವ ಆರ್ ಸಿ ಇ ಪಿ ಕಾಯ್ದೆಗೆ ಸಹಿ ಹಾಕುವುದು, ನಮ್ಮ ರಾಜ್ಯದ ರೈತರು ಹಾಗೂ ಹಾಲು ಉತ್ಪಾದಕರ
ಪಾಲಿನ ಮರಣ ಶಾಸನಕ್ಕೆ ಸಹಿ ಹಾಕಿದಂತೆ ಎಂದು ಸಂಸದ ಡಿ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್
ನಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ
ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತರ ಜೀವನ ಮಟ್ಟವನ್ನು ಸುಧಾರಿಸುವ ಭರವಸೆ
ನೀಡಿದ ಪ್ರಧಾನಿ ನರೇಂದ್ರ ಮೋದಿ, ಇದೀಗ ರೈತರ ಆದಾಯದ ಮೂಲವಾದ ಹಾಲು ಉತ್ಪಾದನೆಗೆ ಪೆಟ್ಟು ನೀಡುವ
ದುಷ್ಕೃತ್ಯಕ್ಕೆ ಕೈ ಇಟ್ಟಿದ್ದಾರೆ. ರೈತರೇ ಈ ದೇಶದ ಬೆನ್ನೆಲಬು ಎಂದು ಎಲ್ಲ ರಾಜಕಾರಣಿಗಳು ಭಾಷಣ
ಮಾಡುತ್ತಾರೆ. ಇದನ್ನು ನಂಬಿ ದೇಶದ ಶೇಕಡಾ 60 ರಷ್ಟು ಜನರು ಇಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ
ಎಂದರು.
ದೇಶದಲ್ಲಿ ಆರ್ಥಿಕ
ಹಿಂಜರಿತ ಇದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕತ್ತಿಲ್ಲ. ರೈತ ಸಮುದಾಯದ ಅಭಿವೃದ್ದಿಗೆ
ಶ್ರಮಿಸಲಿದ್ದೇವೆ ಎನ್ನುವ ಭರವಸೆಯನ್ನು ನರೇಂದ್ರ ಮೋದಿ ಅವರು ನೀಡಿದ್ದರು. ಆದರೆ, ಈಗ ಈ ಕಾಯ್ದೆಗೆ
ಸಹಿ ಹಾಕುವ ಮೂಲಕ ನೀವು ದೇಶಧ 3 ಕೋಟಿ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯಕ್ಕೆ ಮುಂದಾಗುತ್ತಿದ್ದೀರಿ
ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವೆಂಬರ್ 4ರಂದು ಈ
ಕಾಯ್ದೆಗೆ ಸಹಿ ಹಾಕುವ ಮೂಲಕ ವಿದೇಶದಲ್ಲಿ ನೀವು ಚಪ್ಪಾಳೆ ತಟ್ಟಿಸಿಕೊಳ್ಳಬಹುದು. ಆದರೆ ಮುಂದಿನ ದಿನಗಳಲ್ಲಿ
ಈ ದೇಶದ ಜನರ ಸಿಟ್ಟಿಗೆ ಗುರಿಯಾಗುತ್ತೀರಿ. ದಿನ ಬೆಳಿಗ್ಗೆ ಎದ್ದು ಕಷ್ಟ ಪಟ್ಟು ಡೈರಿಗೆ ಹಾಕುವ ಕಷ್ಟದ
ಕೈಗಳಿಗೆ ನೀವು ವಿಷ ನೀಡುತ್ತಿದ್ದೀರಿ ಎಂದರು.
ಕೇಂದ್ರದ ಧೋರಣೆ ವಿರುದ್ಧ
ರಾಜ್ಯ ಸರಕಾರ ದ್ವನಿ ಎತ್ತಬೇಕು. ರಾಜ್ಯ ಸರಕಾರ ವಿರೋಧ ಪಕ್ಷದ ನಾಯಕರನ್ನು ಕರೆದುಕೊಂಡು ಕೇಂದ್ರ
ಸರಕಾರಕ್ಕೆ ಮನವಿ ಸಲ್ಲಿಸಬೇಕು. ಈ ಬಗ್ಗೆ ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ದ್ವನಿ ಎತ್ತಲಿದ್ದೇವೆ
ಎಂದು ಹೇಳಿದರು.
ಬೆಂಗಳೂರು ನಗರ, ಗ್ರಾಮಾಂತರ
ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ,
ರಾಜ್ಯದ ಹಾಲು ಉತ್ಪಾದಕರು ಹಾಗೂ ರೈತರ ಜೀವನವನ್ನು ದುಸ್ಥಿತಿಗೆ ತಳ್ಳುವ ಒಪ್ಪಂದ ಇದಾಗಿದೆ. ಈ ಒಪ್ಪಂದದ
ವಿರುದ್ದ ನಾವು ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದೇವೆ.
ಇಂದು ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸುತ್ತಿದ್ದು, ನವೆಂಬರ್
4 ರಂದು ಈ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದಲ್ಲಿ ರಾಜ್ಯದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ
ನೀಡಿದರು.
ಪ್ರತಿಭಟನೆಯಲ್ಲಿ
ಬಮೂಲ್ ನ ನಿರ್ದೇಶಕರುಗಳಾದ ಹರೀಶ್ ಕುಮಾರ್, ಕೇಶವಮೂರ್ತಿ ಪಾಲ್ಗೊಂಡಿದ್ದರು. ಹಾಲು ಉತ್ಪಾದಕರು ಕೇಂದ್ರ
ಹಾಗೂ ರಾಜ್ಯ ಸರಕಾರದ ವಿರುದ್ದ ದನಿ ಎತ್ತಿದರು.