ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ ಕಾಳಜಿ ಅಗತ್ಯ: ಡಾ.ನರೇಂದ್ರ ಪವಾರ

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ ಕಾಳಜಿ ಅಗತ್ಯ: ಡಾ.ನರೇಂದ್ರ ಪವಾರ  Mental health needs to be taken care of as much as physical health: Dr. Narendra Pawar

ಲೋಕದರ್ಶನ ವರದಿ  

ಮುಂಡಗೋಡ 08 :  ಇಂದಿನ ಒತ್ತಡದ ಜೀವನಶೈಲಿಯಲ್ಲಿ ಜನರು ಕೇವಲ ದೈಹಿಕ ಸಾಮರ್ಥ್ಯದ ಕುರಿತು ಕಾಳಜಿ ವಹಿಸುತ್ತಿದ್ದಾರೆ.ಆದರೆ ಮಾನಸಿಕ ಆರೋಗ್ಯ ಅಸಮತೋಲನಗೊಂಡರೆ ಅದು ನೇರವಾಗಿ ದೈಹಿಕ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ ಕುರಿತು ಜಾಗೃತೆ ವಹಿಸುವುದು ಅತ್ಯವಶ್ಯ" ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಹೇಳಿದರು. ಮಂಗಳವಾರ ನೀತಿ ಆಯೋಗದ ಮಹತ್ವಾಕಾಂಕ್ಷಿಯ ’ರಾಜ್ಯ ಸಂಪೂರ್ಣತ ಅಭಿಯಾನ 2.0’ ಹಾಗೂ ಅಂತರಾಷ್ಟ್ರೀಯ ಆರೋಗ್ಯ ದಿನಾಚರಣೆ ಅಂಗವಾಗಿ ತಾಲೂಕಾ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಶಿಬಿರ ಹಾಗೂ ವಿಶ್ವ ಬಾಯಿ ಆರೋಗ್ಯ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಆಹಾರ ಮತ್ತು ಆರೋಗ್ಯ: ಸೇವಿಸುವ ಆಹಾರವು ನಮ್ಮ ಯೋಚನೆ ಮತ್ತು ಭಾವನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದ ಅವರು, ಹೊರಗಿನ ಜಂಕ್ಫುಡ್ಗಳನ್ನು ತ್ಯಜಿಸಿ ಮನೆಯ ಪೌಷ್ಠಿಕ ಹಾಗೂ ಸಾತ್ವಿಕ ಆಹಾರದ ಮೇಲೆ ಅವಲಂಬಿತರಾಗಬೇಕು ಎಂದು ಸಲಹೆ ನೀಡಿದರು. ಧ್ಯಾನ ಮತ್ತು ವ್ಯಾಯಾಮದ ಮಹತ್ವ: ಮಾನಸಿಕ ಆರೋಗ್ಯದ ವೃದ್ಧಿಗಾಗಿ ಸಕಾರಾತ್ಮಕ ಚಿಂತನೆ ಹಾಗೂ ಧ್ಯಾನ ಒಂದು ಉತ್ತಮ ವ್ಯಾಯಾಮವಾದರೆ, ದೈಹಿಕ ಆರೋಗ್ಯಕ್ಕಾಗಿ ಆಟೋಟ ಸೇರಿದಂತೆ ನಿಯಮಿತ ದೈಹಿಕ ಕಸರತ್ತುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.  

ವೈಜ್ಞಾನಿಕ ಚಿಕಿತ್ಸೆಗೆ ಆದ್ಯತೆ: ವಿಶ್ವ ಆರೋಗ್ಯ ದಿನದ ಮಹತ್ವ ಸಾರಿದ ಡಾ. ಪವಾರ, "ವಿಜ್ಞಾನದ ಶೋಧನೆಯಿಂದಾಗಿ ಇಂದು ಅನೇಕ ಕಾಯಿಲೆಗಳಿಗೆ ಗುಣಮಟ್ಟದ ಲಸಿಕೆ ಹಾಗೂ ಚಿಕಿತ್ಸೆ ಲಭ್ಯವಿದೆ. ಸಾರ್ವಜನಿಕರು ಕಾಲಕಾಲಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆ ಹಾಗೂ ವೈಜ್ಞಾನಿಕ ಸಲಹೆಗಳನ್ನು ಪಾಲಿಸುವ ಮೂಲಕ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ," ಎಂದರು. ಕಾರ್ಯಕ್ರಮದ ವಿವರ: ತಾ.ಪಂ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ ಕಾರ್ಯಕ್ರಮ ಉದ್ಘಾಟಿಸಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮಣ ನಾಯಕ್, ಡಾ. ಶಿವಕುಮಾರ ಚಕ್ರಸಾಲಿ, ಡಾ. ಶ್ವೇತಾ, ಡಾ. ಲಕ್ಷ್ಮಿ ದೊಡ್ಡಮನಿ ಸೇರಿದಂತೆ ಅನೇಕ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. ಶಿಬಿರದಲ್ಲಿ ಸುಮಾರು 335ಕ್ಕೂ ಹೆಚ್ಚು ಹೊರ ರೋಗಿಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಯಿತು. ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ್ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.