ನಾಗಾವಿ ಗ್ರಾಮದಲ್ಲಿ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೆ

ನಾಗಾವಿ ಗ್ರಾಮದಲ್ಲಿ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೆ Memorial service for the poet and singer Puttaraja in Nagavi village

ನಾಗಾವಿ ಗ್ರಾಮದಲ್ಲಿ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೆ 

ಗದಗ 4: ನಡೆದಾಡುವ ದೇವರೆಂದೇ ಖ್ಯಾತಿ ಹೊಂದಿರುವ ಲಿಂ.ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳು ಅಂಧ, ಅನಾಥರ ಬಾಳಿಗೆ ಬೆಳಕಾಗಿದ್ದರು. ಅವರಿಂದ ಸಂಗೀತ ಕಲಿತ ಲಕ್ಷಾಂತರ ಕಲಾವಿದರು ವಿಶ್ವದೆಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಮಾನವರಾಗಿ ಜನಿಸಿದ್ದರೂ ಕೂಡಾ ತಮ್ಮ ಸತ್ಕಾರ್ಯಗಳ ಮೂಲಕ ದೇವರಾದರು ಎಂದು ಬಳಗಾನೂರು ಚಿಕೇನಕೊಪ್ಪ ಮಠದ ಶಿವಶಾಂತವೀರ ಶರಣರು ಹೇಳಿದರು. 

ತಾಲೂಕಿನ ನಾಗಾವಿ ಗ್ರಾಮದ ಬಸವೇಶ್ವರ ಭಜನಾ ಸಂಘದ ವತಿಯಿಂದ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೆ ಆಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ, ಸಾಹಿತ್ಯ ಸೇವೆಗಾಗಿ ವಿವಿಧ ಸಂಘಟನೆಗಳಿಂದ ವಿವಿಧ ಪ್ರಶಸ್ತಿಗಳೂ ಸೇರಿದಂತೆ  ಸರಕಾರದಿಂದ ಪದ್ಮ ಪ್ರಶಸ್ತಿ ಪಡೆದಿದ್ದಾರೆ. ಅವರ ಪುಣ್ಯಸ್ಮರಣೆಯನ್ನು ದೇಶಾದ್ಯಂತ ಆಚರಿಸುತ್ತಿರುವುದು ಅವರ ಘನತೆಯನ್ನು ತೋರುತ್ತದೆ ಎಂದು ಶ್ರೀಗಳು ಹೇಳಿದರು. 

ಇದೇ ಸಂದರ್ಭದಲ್ಲಿ ನಾಗಾವಿ ನಾನಾ ಯೂಟ್ಯೂಬ್ ಮುಖಾಂತರ ಹೊರ ತಂದಿರುವ ಶರಣರ ಸಂದೇಶ ಕಾರ್ಯಕ್ರಮಕ್ಕೆ ವೀಕ್ಷಕರ ಆಹ್ವಾನಪತ್ರಿಕೆ ಬಿಡುಗಡೆ ಮಾಡುವುದರೊಂದಿಗೆ ಪ್ರಥಮ ಸಂಚಿಕೆಗೆ ಚಾಲನೆ ನೀಡಿದರು. 

ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎಸ್‌. ಚಿಂಚಲಿ ಪ್ರಾಸ್ತಾವಿಕವಾಗಿ ಮತನಾಡಿ, ಸ್ವಾಗತಿಸಿದರು. 

ನಾಗಾವಿ ಗ್ರಾಮದ ಗಂಗಾಧರೇಶ್ವರ ಮಠದ ವೇದಮೂರ್ತಿ ಮೃತ್ಯುಂಜಯ ಸ್ವಾಮೀಜಿ ಹಿರೇಮಠ ಸಮ್ಮುಖ ವಹಿಸಿದರು. ಎಸ್‌.ಬಿ. ಹುಬ್ಬಳ್ಳಿ, ಸಿ.ವಿ. ಮಡಿವಾಳರ, ಜಿ.ಪಿ. ಹೊಂಬಳ, ಅಳಗವಾಡಿಯ ಗುರ​‍್ಪ ಅವರಾದಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು. 

ಬಸವರಾಜ ಎಸ್‌. ಹೊಂಬಳ ಪ್ರಾರ್ಥಿಸಿದರು. ಮಲ್ಲಪ್ಪ ಗೋಲಪ್ಪನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ಬಸವೇಶ್ವರ ಭಜನಾ ಸಂಘದವರು ಮುಂಜಾನೆ ಪುಟ್ಟರಾಜ ಗವಾಯಿಗಳವರ ಭಾವಚಿತ್ರದೊಂದಿಗೆ ಭಜನೆ ಗೀತೆಗಳನ್ನು ಹಾಡುತ್ತ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.  ಮಧ್ಯಾಹ್ನ ಅನ್ನದಾಸೋಹ ನಡೆಯಿತು. ಬಳಿಕ ಅಹೋರಾತ್ರಿ ಭಜನಾ ಕಾರ್ಯಕ್ರಮ ಜರುಗಿತು.