ಸರ್ಕಾರಿ ಶಾಲೆಗಳ ದ್ವಿಭಾಷಾ ನೀತಿ ವಿರೋಧಿಸಿ ಮನವಿ

ಸರ್ಕಾರಿ ಶಾಲೆಗಳ ದ್ವಿಭಾಷಾ ನೀತಿ ವಿರೋಧಿಸಿ ಮನವಿ Memorandum opposing the bilingual policy in government schools

ಲೋಕದರ್ಶನ ವರದಿ 

  ವಿಜಯಪುರ 07:  ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಿರುವ ದ್ವಿಭಾಷಾ ಶಿಕ್ಷಣ ನೀತಿ ಹಾಗೂ ಶಿಕ್ಷಕರ ನೇಮಕಾತಿ ಅಧಿಸೂಚನೆಯನ್ನು ವಿರೋಧಿಸಿ ಅಖಿಲ ಭಾರತ ಸಾಹಿತ್ಯ ಪರಿಷತ್ (ನೋಂ.) ವಿಜಯಪುರ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.  

ಸಮಿತಿಯ ಪದಾಧಿಕಾರಿಗಳು ಮಾತನಾಡಿ, ದ್ವಿಭಾಷಾ ಶಿಕ್ಷಣ ನೀತಿಯಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಬೋಧನೆಯಲ್ಲಿ ಅಸಮಾನತೆ ಕಂಡುಬರುತ್ತಿದ್ದು, ಪರೀಕ್ಷೆಯಲ್ಲಿಯೂ ಇಂಗ್ಲಿಷ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ದೂರಿದರು.  

ಇದೇ ವೇಳೆ, ಶಾಲಾ ಶಿಕ್ಷಣ ಇಲಾಖೆಯ 15 ಸಾವಿರ ಶಿಕ್ಷಕರ ನೇಮಕಾತಿ ಕರಡು ಅಧಿಸೂಚನೆಯಲ್ಲಿ ಕನ್ನಡ ಶಿಕ್ಷಕರ ಹುದ್ದೆಗಳಿಗೆ ಅವಕಾಶ ಕಲ್ಪಿಸದಿರುವುದನ್ನು ಖಂಡಿಸಿದರು. ವಿಜ್ಞಾನ, ಗಣಿತ ಸೇರಿದಂತೆ ಎಲ್ಲ ವಿಷಯಗಳ ಶಿಕ್ಷಕರ ನೇಮಕಾತಿಗೆ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯನ್ನು ಕಡ್ಡಾಯಗೊಳಿಸಿರುವುದನ್ನೂ ವಿರೋಧಿಸಿದರು.  

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವಿವೇಕ ಕುಲಕರ್ಣಿ, ಉಪಾಧ್ಯಕ್ಷ ಆನಂದ ಗೋಡಸೆ, ವಿಭಾಗ ಸಂಯೋಜಕ ಶ್ರೀರಂಗ ಪುರಾಣಿಕ, ಕಾರ್ಯದರ್ಶಿ ಸುಕಾಂತ ಕುಲಕರ್ಣಿ, ಸಹ ಕಾರ್ಯದರ್ಶಿ ಅನೀಲ ಬೆಳುಂಡಗಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.