ಆಗಸ್ಟ್‌ 8ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ

ಆಗಸ್ಟ್‌ 8ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ  Mega free health check-up and surgery camp on August 8


ರಾಣೆಬೆನ್ನೂರು 3: ನಗರದ ಕೆ.ಎಲ್‌.ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯ ಆವರಣದಲ್ಲಿ ಆಗಸ್ಟ್‌ 8, 2026ರಂದು ಬೆಳಿಗ್ಗೆ 10.30ಕ್ಕೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು ಕುಡಚಿ ತಿಳಿಸಿದರು.  

ನಗರದ ರಾಜರಾಜೇಶ್ವರಿ ಕಾಲೇಜಿನ ಸಭಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.  

ಉಚಿತ ಆರೋಗ್ಯ ಸೇವೆ ಎಲ್ಲರಿಗೂ  

ಡಾ. ಪ್ರಭಾಕರ ಕೋರೆ ಅವರ ದೂರದೃಷ್ಟಿ ಹಾಗೂ ಜನಸೇವೆಯ ಸಂಕಲ್ಪದಂತೆ ಸಮಾಜದ ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.  

ಇದು ನಗರದಲ್ಲಿ ನಡೆಯುತ್ತಿರುವ ಎರಡನೇ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವಾಗಿದ್ದು, ನಗರ, ತಾಲೂಕು ಹಾಗೂ ಜಿಲ್ಲೆಯ ಜನರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.  

ತಜ್ಞ ವೈದ್ಯರಿಂದ ಉಚಿತ ತಪಾಸಣೆ  

ವೈದ್ಯಕೀಯ ಚಿಕಿತ್ಸೆಗಳು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುವ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದು, ಅಗತ್ಯವಿರುವವರಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ಸೌಲಭ್ಯವೂ ಕಲ್ಪಿಸಲಾಗುವುದು ಎಂದು ತಿಳಿಸಿದರು.  

ನಾಲ್ಕು ಸಾವಿರ ಮಂದಿಗೆ ಆರೋಗ್ಯ ಸೇವೆ ಗುರಿ  

ಶಿಬಿರದಲ್ಲಿ ಸುಮಾರು 4,000 ನಾಗರಿಕರಿಗೆ ಆರೋಗ್ಯ ಸೇವೆ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 2,000ಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿದ್ದಾರೆ. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಲಿದೆ ಎಂದು ಹೇಳಿದರು.  

ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನ  

ಕೆಎಲ್‌ಇ ಸ್ಥಳೀಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡ ಮಾತನಾಡಿ, ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಪ್ರತಿವರ್ಷ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.  

ತಾಲೂಕಿನ 103 ಗ್ರಾಮಗಳ ಪೈಕಿ 66 ಗ್ರಾಮಗಳಲ್ಲಿ ಈಗಾಗಲೇ ಶಿಬಿರದ ಕುರಿತು ಜಾಗೃತಿ ಮೂಡಿಸಿ ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ. ವೈದ್ಯರು, ರೋಟರಿ, ಲಯನ್ಸ್‌ ಹಾಗೂ ವೈದ್ಯಕೀಯ ಸಂಘಗಳ ಸಹಕಾರದಿಂದ ಶಿಬಿರ ಯಶಸ್ವಿಯಾಗಿ ನಡೆಯಲಿದೆ ಎಂದು ಹೇಳಿದರು.  

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತಿ  

ಸುದ್ದಿಗೋಷ್ಠಿಯಲ್ಲಿ ಡಾ. ಪ್ರವೀಣ ಖನ್ನೂರ, ಡಾ. ಬಸವರಾಜ ಕೇಳಗಾರ, ವೀರೇಶ್ ಮೊಟಗಿ, ಬಸವರಾಜ ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ಬಸವರಾಜ ಹುಲ್ಲತ್ತಿ, ಸುಜೀತ್ ಜಂಬಿಗಿ, ಜಿ.ಜಿ. ಹೊಟ್ಟಿಗೌಡರ, ಎಸ್‌.ಟಿ. ವೇದಮೂರ್ತಿ, ಉಮಾಪತಿ ಹೊನ್ನಾಳಿ, ಡಾ. ನಾರಾಯಣ ನಾಯಕ್ ಎಸ್‌. ಸೇರಿದಂತೆ ಹಲವರು ಉಪಸ್ಥಿತರಿದ್ದರು.