ರೇಬೀಸ್ ಕುರಿತು ಜನಜಾಗೃತಿ ಮೂಡಿಸಿದ ವೈದ್ಯ ವಿದ್ಯಾರ್ಥಿಗಳು

ರೇಬೀಸ್ ಕುರಿತು ಜನಜಾಗೃತಿ ಮೂಡಿಸಿದ ವೈದ್ಯ ವಿದ್ಯಾರ್ಥಿಗಳು  Medical students raised public awareness about rabies


ವಿಜಯಪುರ, ಸೆ.19: ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್‌. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಗದತಂತ್ರ ವಿಭಾಗದ ವತಿಯಿಂದ ಶನಿವಾರ ವಿಶ್ವ ರೇಬಿಸ್ ದಿನ ಆಚರಿಸಲಾಯಿತು.  

ಈ ಅಂಗವಾಗಿ ರೇಬೀಸ್ ವೈರಾಣು ಹರಡುವ ವಿಧಾನ, ರೋಗಪೀಡಿತ ಸಾಕು ನಾಯಿಗಳು ಹಾಗೂ ಬೀದಿ ನಾಯಿಗಳಿಂದ ಎದುರಾಗಬಹುದಾದ ಅಪಾಯಗಳ ಕುರಿತು ಜನಜಾಗೃತಿ ಅಭಿಯಾನ ನಡೆಸಲಾಯಿತು. ಮಹಾವಿದ್ಯಾಲಯದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಭಿಯಾನದಲ್ಲಿ ಪಾಲ್ಗೊಂಡರು.  

ಮಹಾವಿದ್ಯಾಲಯದ ಆವರಣದಿಂದ ನಗರದ ಕೇಂದ್ರ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಲಾಯಿತು. ಜಾಥಾದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿ, ನಾಯಿ ಕಡಿತದಿಂದಾಗುವ ಅಪಾಯ, ಮುನ್ನೆಚ್ಚರಿಕಾ ಕ್ರಮಗಳು, ರೇಬೀಸ್ ಲಕ್ಷಣಗಳು, ಪ್ರಥಮ ಚಿಕಿತ್ಸೆ ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ‘ರೇಬೀಸ್ ಮುಕ್ತ ಭಾರತ’ ನಿರ್ಮಾಣದ ಕುರಿತು ಅರಿವು ಮೂಡಿಸಲಾಯಿತು.  

ಅಗದತಂತ್ರ ವಿಭಾಗದ ಮುಖ್ಯಸ್ಥೆ ಡಾ. ಮಲ್ಲಮ್ಮ ಬಿರಾದಾರ, ಸಹಾಯಕ ಪ್ರಾಧ್ಯಾಪಕ ಡಾ. ದಾಮೋದರ ನಾಯಕ, ಸಹಪ್ರಾಧ್ಯಾಪಕಿ ಡಾ. ಶ್ವೇತಾ ನಿಡಗುಂದಿ ಹಾಗೂ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಜಾಥಾಕ್ಕೆ ಚಾಲನೆ ನೀಡಿದರು. ರೇಬೀಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.