ವೈದ್ಯಕೀಯ ಸೀಟು ಹಂಚಿಕೆ ಅಕ್ರಮ: ಎಸಿಬಿಗೆ ದೂರು

ಬೆಂಗಳೂರು, ಜ 30,  ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಶಾಮೀಲಾಗಿ 2018-19ನೇ ಸಾಲಿನ ಎಂಬಿಬಿಎಸ್ ಮತ್ತು ಎಂ.ಡಿ.ಎಂ.ಎಸ್ ಸ್ನಾತಕೋತ್ತರ ವೈದ್ಯಕೀಯ ವಿಭಾಗದ ಸೀಟು ಹಂಚಿಕೆ ಮಾಡಿ 1100 ಕೋಟಿ ರೂ ಗೂ ಅಧಿಕ ಭ್ರಷ್ಟಾಚಾರ ನಡೆಸಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಪರೀಕ್ಷಾ ಪ್ರಾಧಿಕಾರದ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ ಎ.ಸಿ.ಬಿ ಗೆ ದೂರು ನೀಡಲಾಗಿದೆ. 

ಕರ್ನಾಟಕ ಪರೀಕ್ಷಾ ಮಂಡಳಿ ಅಧಿಕಾರಿಗಳು, ಶಿಕ್ಷಣ ಸಚಿವಾಲಯ ಸಿಬ್ಬಂದಿ ವರ್ಗ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸೀಟು ಹಂಚಿಕೆ ಹಗರಣದಲ್ಲಿ ಭಾಗಿಯಾಗಿದ್ದು, ಈ ಹಗರಣವನ್ನು ತನಿಖೆಗೊಳಪಡಿಸಿ ರಾಜ್ಯದ ಬೊಕ್ಕಸಕ್ಕಾಗಿರುವ ನಷ್ಟ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಮತ್ತು ಶೋಷಣೆ ವಿರುದ್ಧ ತನಿಖೆ ನಡೆಸಿ ಸೂಕ್ತ‌ ಕಾನೂನು ಕ್ರಮ ಜರುಗಿಸುವಂತೆ ಜನ್ಮಭೂಮಿ ಫೌಂಡೇಷನ್ ಸಂಘಟನೆಯ ವಕೀಲ ನಟರಾಜ್ ಶರ್ಮಾ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಮಹಾ‌ನಿರೀಕ್ಷಕರಿಗೆ ದೂರು ನೀಡಿದ್ದಾರೆ.

ಸ್ಥಳ ನಿಯೋಜನೆಗೆ ಅರ್ಹತೆ ಇಲ್ಲದ ವ್ಯಕ್ತಿಗಳನ್ನು ಕೆ‌ಸಿ‌ಎಸ್‌ಆರ್ ನಿಯಮದ ವಿರುದ್ಧವಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿನ ಶಿಕ್ಷಣ ಮಂತ್ರಿ ಹಾಗೂ ರಾಜಭವನವದ ಕೆಲ ಅಧಿಕಾರಿಗಳ ಸಹಕಾರದಿಂದ ಆಯಕಟ್ಟಿನ ಜಾಗಗಳಿಗೆ ವರ್ಗಾವಣೆ ಮಾಡಿ ಸೀಟು ಹಂಚಿಕೆ ಹಗರಣದ ನಡೆಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿದೆ ಆರೋಪಿಸಿದೆ.