187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅರ್ಥಪೂರ್ಣ ಆಚರಣೆ

187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅರ್ಥಪೂರ್ಣ ಆಚರಣೆ  Meaningful celebration of the 187th World Photography Day

ಲೋಕದರ್ಶನ ವರದಿ 

ಕಂಪ್ಲಿ, ಆ.20: ಪಟ್ಟಣದಲ್ಲಿ ಕಂಪ್ಲಿ ತಾಲ್ಲೂಕು ಫೋಟೋಗ್ರಾಫರ್ಸ್‌ ಮತ್ತು ವಿಡಿಯೋಗ್ರಾಫರ್ಸ್‌ ಸಂಘದ ವತಿಯಿಂದ 187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಪಟ್ಟಣದ ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಾಲ್ಲೂಕಿನ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳು ಮೆರವಣಿಗೆ ನಡೆಸಿದರು. ಮೆರವಣಿಗೆಯು ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದವರೆಗೆ ನಡೆಯಿತು.  

ನಂತರ ಪಟ್ಟಣದ ಕುರುಗೋಡು ರಸ್ತೆಯಲ್ಲಿರುವ ಕಂಪ್ಲಿರಾಯ ಬುದ್ಧಿಮಾಂದ್ಯ ಶಾಲೆಯ ಮಕ್ಕಳಿಗೆ ಹಣ್ಣು, ಹಾಲು ಹಾಗೂ ಬ್ರೆಡ್ ವಿತರಿಸಲಾಯಿತು. ಎಪಿಎಂಸಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕಿನ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.  

ಸಂಘದ ಅಧ್ಯಕ್ಷ ಜಗದೀಶಗೌಡ ಸರ್ಕಾರ ಮಾತನಾಡಿ, ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳಿಗೆ ಕಾರ್ಮಿಕ ಇಲಾಖೆಯ ಮೂಲಕ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು. ನಿವೇಶನಗಳನ್ನು ಮಂಜೂರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಸುರಸಾನಿ, ಜಿ.ಎಚ್‌. ಶಶಿಧರಗೌಡ, ದೇವಸಮುದ್ರ ತಿಪ್ಪೇಸ್ವಾಮಿ, ಇಲಿಯಾಸ್, ಬುಕ್ಕಸಾಗರದ ವಿರೂಪಾಕ್ಷಿ, ಎಮ್ಮಿಗನೂರು ಬಸವರಾಜ, ಶಿವಕುಮಾರ್, ಪ್ರಕಾಶ್ ಸ್ವಾಮಿ, ಮಹೇಶ್ ಸ್ವಾಮಿ ಸೇರಿದಂತೆ ತಾಲ್ಲೂಕಿನ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳು ಉಪಸ್ಥಿತರಿದ್ದರು.