ನ.1 ರಂದು ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ: ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ 16: ಜಿಲ್ಲಾಡಳಿತದಿಂದ ನವೆಂಬರ್ 1 ರಂದು ಅರ್ಥಪೂರ್ಣ ಕನ್ನಡ ರಾಜ್ಯೋತ್ಸ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ನಗರದ ಮೈಲಾರ ಮಹದೇವಪ್ಪ ವೃತ್ತದಿಂದ  ಹೊರಡುವ ಭುವನೇಶ್ವರಿ ಭಾವಚಿತ್ರ ಮೆರವಣಿಗೆ  ಅಗತ್ಯ ಜನಪದ ಕಲಾ ತಂಡಗಳನ್ನು ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಕ್ರೀಡಾಂಗಣ ಸ್ವಚ್ಛತೆ, ವೇದಿಕೆ ಅಲಂಕಾರ, ಆಸನ ವ್ಯವಸ್ಥೆ, ಪಥಸಂಚಲನ,  ಅಂಬ್ಯುಲೆನ್ಸ್‌,  ಕುಡಿಯುವ ನೀರು, ಧ್ವನಿವರ್ಧಕ ಸೇರಿದಂತೆ ಅಗತ್ಯ ಸಿದ್ಧತೆಕೈಗೊಳ್ಳುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಎಲ್ಲ ಸರ್ಕಾರಿ ಕಟ್ಟಗಳಿಗೆ ದೀಪಾಲಂಕಾರ ಮಾಡಬೇಕು ಹಾಗೂ ನಗರದ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಅವರು ಕಾರ್ಯಕ್ರಮದ ರೂಪರೇಷೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀಮತಿ ಮಮತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಉಮೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್‌.ವಿ.ಚಿನ್ನಿಕಟ್ಟಿ, ತಹಶೀಲ್ದಾರ ಶ್ರೀಮತಿ ಶರಣಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.