ಅಂಗ ಸಂಸ್ಥೆ ಸೌರಭದ ಶರಣ ಚಿಂತನ ಕಾರ್ಯಕ್ರಮ : ಶಂಕ್ರಮ್ಮ ಮಡಿವಾಳರ

ಮುಂಡರಗಿ 16: ತಾಯಿ ನಿಜವಾದ ಕಾಯಕ ಜೀವಿ. 60ರ ವಯೋವೃದ್ದೆಯವರೆಗೂ ತಮ್ಮ ಮೂಲ ವೃತ್ತಿ ಬಟ್ಟೆ ತೊಳೆಯುವ ಕಾಯಕದ ಮೂಲಕ ಮಕ್ಕಳ ಸುಖಕರವಾದ ಬದುಕಿನ ಜೊತೆಗೆ ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ಸಾಕ್ಷಿಯಾದ ನಮ್ಮ ತಾಯಿ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಶರಣ ಚಿಂತಕ ವೀರಣ್ಣ ಮಡಿವಾಳರ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು. 

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆ ಸೌರಭದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶರಣ ಚಿಂತನ ಮಾಲಿಕೆಯ ಮೂರನೇ ಕಾರ್ಯಕ್ರಮವನ್ನು ಶತಾಯುಷಿಯಾದ ಶಂಕ್ರಮ್ಮ ಮಡಿವಾಳರ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. 

ಅವರ 60ನೇ ವರ್ಷದಲ್ಲಿ ಕೂಡ ನನ್ನ ತಾಯಿ ಸರಿ ಸುಮಾರು 20 ರಿಂದ 25 ಮನೆಗಳ ಜನರ ಬಟ್ಟೆಯನ್ನು ಒಗೆದು ಮಡಿ ಮಾಡಿಕೊಡುತ್ತಿದ್ದಳು. ಅಂದು ನಮ್ಮ ಪಾಲಕರು ತುಂಬಾ ಬಡತನ ಸ್ಥ್ಥಿತಿಯನ್ನು ಅನುಭವಿಸಿದರು. ತಾಲೂಕಿನ ಎಲ್ಲ ಬಳಗಗಳು ಸೇರಿ ಈ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅಭಿನಂದನಾರ್ಹ ಎಂದು ಸಂತಸ ವ್ಯಕ್ತಪಡಿಸಿದರಲ್ಲದೇ ತಾಯಿ ಶಂಕ್ರಮ್ಮ ಮಡಿವಾಳರವರ ಹೆಸರಿನಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಭವನದ ನಿರ್ಮಾಣ ಕಾರ್ಯಕ್ಕೆ 25ಸಾವಿರ ರೂಗಳ ದೇಣಿಗೆ ನೀಡುವುದಾಗಿ ಘೋಷಿಸಿದರು. 

ವಿಶೇಷ ಉಪನ್ಯಾಸ ನೀಡಿದ ರತ್ನಾ ಕಾಗನೂರಮಠ್ ಮಾತನಾಡಿ, ಮಡಿವಾಳ ಮಾಚಿದೇವರ ಬದುಕಿನ ಕುರಿತಾದ ವಚನಗಳು ಮತ್ತು ಶರಣ ಬಳಗದಲ್ಲಿ ಅವರಲ್ಲಿದ್ದ ಗೌರವದ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಮಡಿವಾಳ ಮಾಚಿದೇವರ ಕುರಿತಾದ ಕೆಲ ಹಂತಿ ಪದಗಳನ್ನು ಹಾಡಿ, ವಿವಿಧ ಶರಣರು ಮಡಿವಾಳ ಮಾಚಿದೇವರನ್ನು ತಂದೆ ಎಂದು ಸಂಭೋಧಿಸಿ ಬರೆದಿರುವ ತಮ್ಮ ವಚನಗಳ ಕುರಿತು ಸವಿವರವಾಗಿ ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಅವರು ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಆಗಿ ಹೋದ ಶರಣರು ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದನ್ನು ಓದಿ ಕೇಳಿ ತಿಳಿದಿರುವ ನಮಗೆ ಅಂತಹದ್ದೇ ಕಾಯಕ ಜೀವನವನ್ನು ಪಾಲಿಸಿರುವ ಶಂಕ್ರಮ್ಮ ಮಡಿವಾಳರವರು ಆದರ್ಶಪ್ರಾಯರು ಎಂದು ಅವರ ಕಾಯಕ ಜೀವನವನ್ನು ಕೊಂಡಾಡಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವೀಣಾ ಪಾಟೀಲ್, ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ ಭವನದ ನಿರ್ಮಾಣ ಕಾರ್ಯದ ಕುರಿತು ಮಾಹಿತಿಯನ್ನು ನೀಡಿ ಕನ್ನಡದ ನಾಡು ನುಡಿಯ ರಕ್ಷಣೆಗೆ, ಕನ್ನಡದ ಮನಸ್ಸುಗಳನ್ನು ಕಟ್ಟುವ ಕಾರ್ಯಕ್ಕೆ ಸಭೆ ಸಮಾರಂಭಗಳನ್ನು  ನಡೆಸಲು ಅವಶ್ಯಕವಾದ ಭೌತಿಕ ಕಟ್ಟಡದ ನಿರ್ಮಾಣಕ್ಕೆ ಎಲ್ಲರೂ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕು ಎಂದು ವಿನಂತಿಸಿಕೊಂಡರು. 

ಈ ವೇಳೆ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ಪ್ರಾಧ್ಯಾಪಕ ಆರ್‌.ಎಲ್‌.ಪೊಲೀಸ್ ಪಾಟೀಲ್, ಕಾವೇರಿ ಬೋಲಾ, ಅಕ್ಕಮ್ಮ ಕೊಟ್ಟೂರ್ ಶೆಟ್ಟರ್, ಲಕ್ಷ್ಮಿ ದೇವಿ ಗುಬ್ಬಿ, ಶೋಭಾ ಪಾಟೀಲ್, ರೇಣುಕಾ ಮಡಿವಾಳರ್, ಮಧುಮತಿ ಇಳಕಲ್, ಆರ್‌.ಕೆ .ರಾಯನಗೌಡ್ರ, ಸಿ.ಎಸ್‌.ಅರಸನಾಳ, ಆರ್‌.ಬಿ.ಹಕ್ಕಂಡಿ, ಸಿ.ಕೆ.ಗಣಪ್ಪನವರ್, ಎಂ.ಎಸ್‌.ಹೊಟ್ಟಿನ್, ಎಂ.ಐ.ಮುಲ್ಲಾ, ಕೊಟ್ರೇಶ್ ಜವಳಿ, ವೀರೇಶ್ ಕಾಗನೂರ್‌ಮಠ, ಹನುಮರೆಡ್ಡಿ ಇಟಗಿ, ಎಂ.ಎಸ್‌.ಶೀರನಹಳ್ಳಿ, ನಾರಾಯಣಪ್ಪ ಗುಬ್ಬಿ, ಕೃಷ್ಣ ಸಾವಕಾರ ಇತರರು ಇದ್ದರು. 

ಶತಾಯುಷಿಯಾದ ಶಂಕ್ರಮ್ಮ ಮಡಿವಾಳರವರನ್ನು ನಾಲ್ಕು ಸಂಘಟನೆಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್‌.ಎಲ್‌.ಪೊಲೀಸ್‌ಪಾಟೀಲ್ ವಂದಿಸಿದರು.