ವಾಷಿಂಗ್ಟನ್, ಫೆ.26, ಸ್ಯಾನ್ ಫ್ರಾನ್ಸಿಸ್ಕೋದ ಮೇಯರ್ ಲಂಡನ್ ಬ್ರೀಡ್ ಅವರು ಮಾರಣಾಂತಿಕ ಕೊರೋನವೈರಸ್ ಹರಡದಂತೆ ಸ್ಥಳೀಯವಾಗಿ ತುರ್ತು ಪರಿಸ್ಥಿತಿ ಘೋಷಿಸುವುದಾಗಿ ತಿಳಿಸಿದ್ದಾರೆ."ಪ್ರಪಂಚದಾದ್ಯಂತ ಕೊರೋನವೈರಸ್ ನಿರಂತರವಾಗಿ ಹರಡುತ್ತಿದ್ದು, ಅದನ್ನು ತಡೆಗಟ್ಟಲು ಹೆಚ್ಚಿನ ಸಂಪನ್ಮೂಲಗಳನ್ನು ನಿಯೋಜಿಸಿ, ನಾವು ಅಧಿಕೃತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಅದಕ್ಕಾಗಿಯೇ ಇಂದು ನಮ್ಮ ಸಿದ್ಧತೆಯನ್ನು ಬಲಪಡಿಸಲು ಒಂದು ಹೆಜ್ಜೆ ಇಡುತ್ತಿದ್ದೇನೆ ಎಂದ ಅವರು, ಕೊರೋನವೈರಸ್ ಹರಡದಂತೆ ಸ್ಥಳೀಯ ತುರ್ತುಸ್ಥಿತಿಯನ್ನು ಘೋಷಿಸಲಾಗುವುದು ಎಂದು ಬ್ರೀಡ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಸ್ತುತ ಯಾವುದೇ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿಲ್ಲ ಎಂದು ಅವರು ದೃಢಪಡಿಸಿದರು. ಆದಾಗ್ಯೂ, ಸ್ಯಾನ್ ಫ್ರಾನ್ಸಿಸ್ಕೋದ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಗ್ರಾಂಟ್ ಕೋಲ್ಫಾಕ್ಸ್, ನಗರ ಮತ್ತು ಚೀನಾ ಮುಖ್ಯ ಭೂಭಾಗದ ನಡುವೆ ಹೆಚ್ಚಿನ ಪ್ರಮಾಣದ ಪ್ರಯಾಣದಿಂದಾಗಿ ನಗರದಲ್ಲಿ ಕೊರೋನ ವೈರಸ್ ಪ್ರಕರಣಗಳು ಹರಡುವ ಸಾಧ್ಯತೆಯಿದೆ ಎಂದು ಹೇಳಿದರು.
ಇದಕ್ಕೂ ಮುನ್ನ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ) ಪ್ರಧಾನ ಉಪನಿರ್ದೇಶಕ ಅನ್ನಿ ಶುಚಾಟ್ ಮಾತನಾಡಿ, ಕರೋನಾ ವೈರಸ್ ಏಕಾಏಕಿ ಜಾಗತಿಕ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ ಎಂದರು.ಈ ತಿಂಗಳ 14 ರಿಂದ ಅಮೇರಿಕಾದಲ್ಲಿ ದೃಢಪಡಿಸಿದ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 53ಕ್ಕೆ ಏರಿದೆ ಎಂದು ಸಿಡಿಸಿ ಹೇಳಿದೆ. ಕೊರೋನ ವೈರಸ್ ಇದುವರೆಗೆ ವಿಶ್ವದಾದ್ಯಂತ 80 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಹೆಚ್ಚಾಗಿ ಚೀನಾದಲ್ಲಿ ಕನಿಷ್ಠ 2,700 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೋನ ವೈರಸ್ ಲಸಿಕೆ ಅಭಿವೃದ್ಧಿಪಡಿಸಲು ಮತ್ತು ವ್ಯಾಪಕ ಏಕಾಏಕಿ ತಯಾರಿ ನಡೆಸಲು ಸೋಮವಾರ ಟ್ರಂಪ್ ಆಡಳಿತವು ಕಾಂಗ್ರೆಸ್ ಗೆ ಹೆಚ್ಚುವರಿ 2.5 ಬಿಲಿಯನ್ ಹಣ ಕೇಳಿದೆ.